ಸಮಗ್ರ ನ್ಯೂಸ್: ಬಂಟ್ವಾಳದ ಬಿಸಿರೋಡ್ ಕೆಎಸ್‌ಆರ್‌ಟಿಸಿ (KSRTC) ಹೊಸ ಬಸ್ ನಿಲ್ದಾಣದ ಬಳಿ ಗುರುವಾರ ಸಂಜೆ ಬಸ್‌ಗಾಗಿ ಕಾಯುತ್ತಿದ್ದ ಯುವತಿಯ ಮೇಲೆ ಅಪರಿಚಿತ ಯುವಕನೊಬ್ಬ ತಲವಾರಿನಿಂದ ಮಾರಣಾಂತಿಕ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ದಾಳಿಗೊಳಗಾದ ಯುವತಿಯನ್ನು ಬಂಟ್ವಾಳ ತಾಲೂಕಿನ ಕಕ್ಯಪದವು ನಿವಾಸಿ ಲಾವಣ್ಯ ಎಂದು ಗುರುತಿಸಲಾಗಿದೆ.
ಗಂಭೀರ ಸ್ಥಿತಿಯಲ್ಲಿರುವ ಯುವತಿಯನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾಳೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಲಾವಣ್ಯ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳಲು ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ಯುವಕ ಏಕಾಏಕಿ ತನ್ನ ಬ್ಯಾಗ್‌ನಿಂದ ಹರಿತವಾದ ತಲ್ವಾರ್ ಹೊರಗೆ ತೆಗೆದಿದ್ದಾನೆ. ಇದನ್ನು ಗಮನಿಸಿ ಅಪಾಯದ ಮುನ್ಸೂಚನೆ ಅರಿತ ಲಾವಣ್ಯ ಪ್ರಾಣಭಯದಿಂದ ಬಸ್ ನಿಲ್ದಾಣದಲ್ಲೇ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ಆದರೆ ಬೆನ್ನಟ್ಟಿದ ಆರೋಪಿ, ಲಾವಣ್ಯರನ್ನು ತಡೆದು ನಿಲ್ಲಿಸಿ ಮಾರಕಾಸ್ತ್ರದಿಂದ ಮನಬಂದಂತೆ ಇರಿದು ರಕ್ತದ ಮಡುವಿನಲ್ಲಿ ಕೆಡವಿ ಸ್ಥಳದಿಂದ ಪರಾರಿಯಾಗಿದ್ದಾನೆ. ಲಾವಣ್ಯಳನ್ನು ಅಟ್ಟಾಡಿಸಿ ಕೊಂದ ಹಂತಕನನ್ನು ಆಕೆಯ ಸಂಬಂಧಿ, ಕಕ್ಯಪದವು ಮೂಲದ ಚೇತನ್ ಎಂದು ಪೊಲೀಸರು ಗುರುತಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಲಾವಣ್ಯ ಹಾಗೂ ಆರೋಪಿ ಚೇತನ್ ಪರಸ್ಪರ ಸಂಬಂಧಿಕರಾಗಿದ್ದರು. ಚೇತನ್ ಕಳೆದ ಕೆಲವು ಸಮಯದಿಂದ ಲಾವಣ್ಯಳನ್ನು ತೀವ್ರವಾಗಿ ಏಕಮುಖವಾಗಿ (One-sided Love) ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಲಾವಣ್ಯ ಈತನ ಪ್ರೇಮ ಪ್ರಸ್ತಾಪವನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಚೇತನ್, ಲಾವಣ್ಯಳನ್ನು ಕೊಲ್ಲಲು ಮುಂಚಿತವಾಗಿಯೇ ಸಂಚು ರೂಪಿಸಿ ಬ್ಯಾಗ್‌ನಲ್ಲಿ ತಲ್ವಾರ್ ರೀತಿಯ ಮಾರಕಾಸ್ತ್ರ ತಂದಿದ್ದನು.
ಕೆಲಸ ಮುಗಿಸಿ ಮನೆಗೆ ತೆರಳಲು ಲಾವಣ್ಯ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ, ಚೇತನ್ ಬ್ಯಾಗ್‌ನಿಂದ ತಲ್ವಾರ್ ಹೊರತೆಗೆದಿದ್ದನು. ಪ್ರಾಣಭಯದಿಂದ ಲಾವಣ್ಯ ಓಡಿದರೂ ಬೆನ್ನಟ್ಟಿದ ಚೇತನ್, ಆಕೆಯ ಮೇಲೆ ಇರಿದು ಪರಾರಿಯಾಗಿದ್ದನು. ತಕ್ಷಣ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ಅರುಣ್ ಕುಮಾರ್ , “ಯುವತಿ ಬಸ್‌ಗಾಗಿ ಕಾಯುತ್ತಿದ್ದಾಗ ಅಪರಿಚಿತನೊಬ್ಬ ತಲವಾರದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಸ್ಥಳೀಯರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ. ಆರೋಪಿ ಯಾರು ಮತ್ತು ಆತನ ಹಿನ್ನೆಲೆ ಏನು ಎಂಬುದರ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನು (Special Team) ರಚಿಸಲಾಗಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು,” ಎಂದು ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ (Attempt to Murder) ಪ್ರಕರಣ ದಾಖಲಾಗಿದೆ.







