15 ಸಾವಿರ ಹೊಸ ಶಿಕ್ಷಕರ ನೇಮಕಾತಿಗೆ ಕರಡು ಅಧಿಸೂಚನೆ ಪ್ರಕಟ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಿಗೆ ಬೋಧನಾ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ನೇಮಕಾತಿ ನಿಯಮಗಳ ಕರಡು ಅಧಿಸೂಚನೆ ಪ್ರಕಟಿಸಿದ್ದು, ಆಮೂಲಕ 15 ಸಾವಿರ ಶಿಕ್ಷಕರ ನೇಮಕಾತಿಗೆ ಚಾಲನೆ ನೀಡಿದೆ.

Ad Widget ... .. Ad Widget .

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಅಧಿಕೃತ ಚಾಲನೆ ನೀಡಿದೆ. ಅದಕ್ಕಾಗಿ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ಕೆಲವು ಬೋಧನಾ ಹುದ್ದೆಗಳಿಗೆ ನೇಮಕಾತಿ) (ವಿಶೇಷ) ನಿಯಮಗಳು 2026ನ್ನು ಪ್ರಕಟಿಸಲಾಗಿದೆ. ಈ ಕರಡು ಅಧಿಸೂಚನೆಯಂತೆ ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್-I ಮತ್ತು II), ಗಣಕ ವಿಜ್ಞಾನ ಶಿಕ್ಷಕರು (ಹೊಸ ವೃಂದ) ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗಳ ಭರ್ತಿಗೆ ಉದ್ದೇಶಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ನೇತೃತ್ವದಲ್ಲಿ 16 ಸದಸ್ಯರ ಪರೀಕ್ಷಾ ಪ್ರಾಧಿಕಾರ ರಚಿಸಲಾಗಿದೆ.

Ad Widget

ಅಧಿಸೂಚನೆಯಲ್ಲಿರುವ ನಿಯಮಾವಳಿಯಂತೆ ಅಭ್ಯರ್ಥಿಗಳ ಆಯ್ಕೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಉಳಿದಂತೆ ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕರ ಅರ್ಹತಾ ಪರೀಕ್ಷೆ ಮತ್ತು ಶೈಕ್ಷಣಿಕ ಅರ್ಹತೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ವೇಟೇಜ್‌ ಆಧಾರದ ಮೇಲೆ ಮೆರಿಟ್‌ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಅಭ್ಯರ್ಥಿಗಳಿಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರತಿ ಪತ್ರಿಕೆಯಲ್ಲೂ ಕನಿಷ್ಠ ಶೇ. 35 ಅಂಕ ಗಳಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಪರೀಕ್ಷೆಯು ಕನ್ನಡ ಮತ್ತು ಇಂಗ್ಲೀಷ್‌ ಮಾಧ್ಯಮದಲ್ಲಿ ನಡೆಯಲಿದೆ.

ಇನ್ನು, ಅಭ್ಯರ್ಥಿಗಳು ಕನಿಷ್ಠ 21 ವರ್ಷ ಪೂರೈಸಿರಬೇಕಿದೆ. ಪರಿಶಿಷ್ಟ ಜಾತಿ/ಪಂಗಡ, ಪ್ರವರ್ಗ-1 ಮತ್ತು ವಿಶೇಷ ಚೇತನರಿಗೆ 43 ವರ್ಷಗಳು, ಪ್ರವರ್ಗ-2ಎ, 2ಬಿ, 3ಎ, 3ಬಿಗೆ 41 ವರ್ಷ ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 38 ವರ್ಷಗಳ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ.

ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ವಸ್ತು ನಿಷ್ಠ ಮತ್ತು ವಿವರಣಾತ್ಮಕ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರಲಿದೆ ಎಂದು ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕರಡು ನಿಯಮಗಳ ಕುರಿತಂತೆ ಆಕ್ಷೇಪಣೆಗಳಿದ್ದರೆ ಅಥವಾ ಸಲಹೆಗಳಿದ್ದರೆ ರಾಜ್ಯಪತ್ರ ಪ್ರಕಟವಾದ 15 ದಿನಗಳ ಒಳಗಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 6ನೇ ಮಹಡಿ, ಬಹುಮಹಡಿಗಳ
ಕಟ್ಟಡ, ಡಾ. ಬಿ.ಆರ್‌. ಅಂಬೇಡ್ಕರ್‌ ವೀದಿ, ಬೆಂಗಳೂರು 560001 ಇಲ್ಲಿಗೆ ಸಲ್ಲಿಸಬೇಕು ಎಂದೂ ಸೂಚಿಸಲಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರು (1ರಿಂದ 5ನೇ ತರಗತಿ) 900, ದೈಹಿಕ ಶಿಕ್ಷಕರು (1ರಿಂದ 8ನೇ ತರಗತಿ) 150, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6ರಿಂದ 8ನೇ ತರಗತಿ) 8500, ಗಣಕ ವಿಜ್ಞಾನ ಶಿಕ್ಷಕರು 500, ಪ್ರೌಢಶಾಲಾ ಸಹ ಶಿಕ್ಷಕರು 4500, ದೈಕ್ಷಿಕ ಶಿಕ್ಷಣ ಶಿಕ್ಷಕರು 450 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗದವರಿಗೆ 6967, ಕಲ್ಯಾಣ ಕರ್ನಾಟಕೇತರ ಭಾಗದವರಿಗೆ 8033 ಸೇರಿ ಒಟ್ಟು 15 ಸಾವಿರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.

Leave a Comment

Your email address will not be published. Required fields are marked *