ಗ್ರಾಹಕರಿಗೆ ಕಹಿಯಾದ ಸಕ್ಕರೆ| ಮೂರೇ ದಿನದಲ್ಲಿ ಶೇ40ರಷ್ಟು ಏರಿಕೆ

ಸಮಗ್ರ ನ್ಯೂಸ್: ಶ್ರಾವಣಮಾಸದಲ್ಲಿ ಸಾಲು ಸಾಲು ಹಬ್ಬಗಳು ಇರುವ ಹಿನ್ನೆಲೆಯಲ್ಲಿ ಹೂವು, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿ ದರ ಗಗನಕ್ಕೇರಿದೆ. ಈ ನಡುವೆ ಗ್ರಾಹಕರಿಗೆ ಕಹಿ ಸುದ್ದಿ ಸಿಕ್ಕಿದ್ದು, ಸಕ್ಕರೆಯ ಬೆಲೆಯಲ್ಲೂ ಭಾರಿ ಹೆಚ್ಚಳವಾಗಿದೆ. ದೇಶೀಯವಾಗಿ ಕಬ್ಬಿನ ಉತ್ಪಾದನೆ ಕುಸಿದ ಹಿನ್ನೆಲೆಯಲ್ಲಿ ಕೇವಲ ಎರಡು ತಿಂಗಳಲ್ಲೇ ಸಕ್ಕರೆ ಬೆಲೆ ಶೇ. 40ರಷ್ಟು ಏರಿಕೆಯಾಗಿದೆ.

. Ad Widget . Ad Widget

ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ಸಕ್ಕರೆಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಬೆಂಗಳೂರಿನ ಮಾರುಕಟ್ಟೆಯಲ್ಲೂ ಸಕ್ಕರೆಯ ಬೆಲೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಹಬ್ಬಗಳು ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ದರ ಏರಿಕೆ ಆಗಿರುವುದರಿಂದ ಗ್ರಾಹಕರ ಜೇಬಿಗೆ ಭಾರವಾಗಲಿದೆ.

. Ad Widget . . Ad Widget . Ad Widget

ಐದು ದಿನಗಳ ಹಿಂದೆ ಕೆ.ಜಿ. ಸಕ್ಕರೆ ಬೆಲೆಯು ಸಗಟು ಮಾರುಕಟ್ಟೆಯಲ್ಲಿ 52 ರೂ. ಇತ್ತು. ಈಗ 65 ರಿಂದ 70ಕ್ಕೆ ಹೆಚ್ಚಳ ಕಂಡಿದೆ. ಕಳೆದ ಎರಡು ತಿಂಗಳಲ್ಲಿ ದೇಶೀಯ ಸಕ್ಕರೆ ಬೆಲೆ ಸುಮಾರು ಶೇ. 40 ಏರಿಕೆ ಕಂಡಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಸಕ್ಕರೆ ಬೆಲೆ ಹೆಚ್ಚಳದ ಬಿಸಿ ಹೆಚ್ಚಿನ ಪ್ರಮಾಣದಲ್ಲಿ ತಟ್ಟಲಿದೆ.

ದೇಶದಲ್ಲಿ ಸಕ್ಕರೆ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸುಂಕರಹಿತ ಸಕ್ಕರೆ ಆಮದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ದೇಶದಲ್ಲಿ ಮುಂಬರುವ ಹಬ್ಬದ ಋತುವಿನಲ್ಲಿ ಸಕ್ಕರೆ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಸುಮಾರು ಒಂದು ದಶಕದ ಬಳಿಕ ಇದೇ ಮೊದಲ ಬಾರಿಗೆ 10 ಲಕ್ಷ ಮೆಟ್ರಿಕ್ ಟನ್ (1 ಮಿಲಿಯನ್ ಟನ್) ಕಚ್ಚಾ ಸಕ್ಕರೆಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಸರಕಾರ ಅನುಮತಿ ನೀಡಿದೆ.

ಸರ್ಕಾರದ ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಪ್ರಮುಖ ಸಕ್ಕರೆ ಉತ್ಪಾದನಾ ಕಂಪನಿಗಳ ಷೇರುಗಳು ಶೇ.5ರ ವರೆಗೆ ಭಾರಿ ಕುಸಿತ ಕಂಡಿವೆ. ಸರಕಾರದ ಆದೇಶದಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಸಕ್ಕರೆ ಪೂರೈಕೆ ಹೆಚ್ಚಾಗಿ, ಬೆಲೆಗಳು ಮತ್ತು ಕಂಪನಿಗಳ ಲಾಭಾಂಶ ಕಡಿಮೆಯಾಗಬಹುದು ಎಂಬ ಆತಂಕ ಹೂಡಿಕೆದಾರರಲ್ಲಿ ಮೂಡಿದೆ. ಪರಿಣಾಮವಾಗಿ ಪ್ರಮುಖ ಕಂಪನಿಗಳ ಷೇರುಗಳಲ್ಲಿ ತೀವ್ರ ಇಳಿಕೆ ದಾಖಲಾಗಿದೆ.

Leave a Comment

Your email address will not be published. Required fields are marked *