ಸಮಗ್ರ ನ್ಯೂಸ್: ಅಕ್ರಮ ಚಿನ್ನ ಸಾಗಾಟ (ಗೋಲ್ಡ್ ಸ್ಮಗ್ಲಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಅವರಿಗೆ ಕಸ್ಟಮ್ಸ್ ಇಲಾಖೆ ಭಾರೀ ಶಾಕ್ ನೀಡಿದ್ದು, ಬರೋಬ್ಬರಿ ₹89 ಕೋಟಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಕಸ್ಟಮ್ಸ್ ಅಧಿಕಾರಿ ಸಂದೀಪ್ ಅವರು ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದು, ದಂಡದ ಮಾಹಿತಿಯನ್ನು ಈಗಾಗಲೇ ರನ್ಯಾ ರಾವ್ ಅವರಿಗೆ ತಲುಪಿಸಲಾಗಿದೆ.
2024ರ ಮಾರ್ಚ್ 7 ರಿಂದ 2025ರ ಫೆಬ್ರವರಿವರೆಗಿನ ಒಂದು ವರ್ಷದ ಅವಧಿಯಲ್ಲಿ ಸುಮಾರು 113 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿರುವ ಕೃತ್ಯದಲ್ಲಿ ನಟಿಯ ಭಾಗಿಯಾಗುವಿಕೆ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ದುಬೈನಿಂದ ಅಕ್ರಮವಾಗಿ ಚಿನ್ನ ತಂದು ಭಾರತದಲ್ಲಿ ಜಾಲ ವಿಸ್ತರಿಸಿದ್ದ ರನ್ಯಾ ರಾವ್, ಸಹ ಆರೋಪಿಗಳಾದ ತರುಣ್ ಸೇರಿದಂತೆ ಇತರ ಮೂವರ ಜೊತೆಗೂಡಿ ಈ ಬೃಹತ್ ಚಿನ್ನದ ವ್ಯವಹಾರ ನಡೆಸಿದ್ದರು ಎಂಬ ಮಾಹಿತಿ ಈಗ ಬಹಿರಂಗವಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ನಡೆಸಿದ ಸುದೀರ್ಘ ಕಾರ್ಯಾಚರಣೆ ಹಾಗೂ ಬಂಧನದ ಬಳಿಕ ಈ ಅಂತರರಾಷ್ಟ್ರೀಯ ಸ್ಮಗ್ಲಿಂಗ್ ಜಾಲದ ಸಂಪೂರ್ಣ ಜಾತಕ ಹೊರಬಂದಿದ್ದು, ಇಲಾಖೆಯು ಇಷ್ಟೊಂದು ದೊಡ್ಡ ಮೊತ್ತದ ದಂಡ ವಿಧಿಸಿರುವುದು ತನಿಖೆಯಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ.









