ಸಮಗ್ರ ನ್ಯೂಸ್: ಪುತ್ತೂರಿನ ದರ್ಬೆಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಅಥವಾ ಒತ್ತಡಕ್ಕೆ ಮಣಿದು ಯಾರನ್ನೂ ಬಂಧಿಸಲು ಸಾಧ್ಯವಿಲ್ಲ. ಸಂಪೂರ್ಣವಾಗಿ ಲಭ್ಯವಿರುವ ಸಾಕ್ಷ್ಯಾಧಾರಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲಷ್ಟೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಅರುಣ್ ಕೆ ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 23ರಂದು ಮುಂಜಾನೆ ಪುತ್ತೂರು ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಲ್ಯಾಮಿನೇಷನ್ ಯಂತ್ರದ ತಾಂತ್ರಿಕ ಸಮಸ್ಯೆಯಿಂದ ದಾಖಲೆ ಹಾಳಾದಾಗ ವಿವಾದ ಶುರುವಾಗಿದೆ. ಇದನ್ನು ಪೊಲೀಸ್ ಠಾಣೆ ಅಥವಾ ಗ್ರಾಹಕ ವೇದಿಕೆ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬಹುದಿತ್ತು.
ಆದರೆ ಗ್ರಾಹಕರು ಹಾಗೂ ಅಂಗಡಿ ಮಾಲಕಿ ಅಂಜನಾ ಪೈ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಸುದರ್ಶನ್ ಪೈ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವುದು ಲಭ್ಯವಿರುವ ವೀಡಿಯೋ ಸಾಕ್ಷ್ಯಗಳಿಂದ ಸ್ಪಷ್ಟವಾಗಿದೆ” ಎಂದರು. ಪ್ರಕರಣದಲ್ಲಿ ಭಾಗಿಯಾದವರ ಹಿನ್ನೆಲೆ ಬಹಿರಂಗಪಡಿಸಿದ ಎಸ್‌ಪಿ, “ಬಂಧಿತ ಸುದರ್ಶನ್ ಪೈ ವಿರುದ್ಧ ಹಿಂದೆ ಕೊಲೆ ಯತ್ನ ಹಾಗೂ ಡ್ರಗ್ಸ್ ದಂಧೆಯ ಪ್ರಕರಣಗಳಿವೆ. ನೌಶಾದ್ ಹಾಗೂ ಸದಾಶಿವ ಪೈ ವಿರುದ್ಧ ರಸ್ತೆ ಜಗಳ ಹಾಗೂ ಹಲ್ಲೆ ನಡೆಸಿದ ಹಳೆಯ ಪ್ರಕರಣಗಳಿವೆ.
ಅಲ್ಲದೆ ಸುದರ್ಶನ್‌ನನ್ನು ವಶಕ್ಕೆ ಪಡೆದಾಗ ಪೊಲೀಸ್ ವಾಹನದೊಳಗೆ ಇಣುಕಿ ಅತಿರೇಕದ ವರ್ತನೆ ತೋರಿದ ನೌಶಾದ್‌ನ ಕೃತ್ಯಗಳೂ ವೀಡಿಯೋದಲ್ಲಿದೆ” ಎಂದು ವಿವರ ನೀಡಿದರು.ಯಾರೇ ಅಪರಾಧ ಎಸಗಿದ್ದರೂ ಧರ್ಮ ಅಥವಾ ಸಮುದಾಯ ಲೆಕ್ಕಿಸದೆ ಕ್ರಮ ಕೈಗೊಳ್ಳಲಾಗುವುದು. ಘಟನೆಗೆ ಕೋಮು ಬಣ್ಣ ಬಳಿದು ಸಮಾಜದಲ್ಲಿ ದ್ವೇಷ ಬಿತ್ತಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕು. ಯಾವುದೇ ಕಾರಣಕ್ಕೂ ಬಂದ್‌ಗೆ ಕರೆ ನೀಡಿದರೆ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.


















