ಸಮಗ್ರ ನ್ಯೂಸ್: ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕಾಗಿದ್ದು, ಕರಾವಳಿಯ ಬಹುತೇಕ ಪ್ರದೇಶಗಳಲ್ಲಿ ಹಾಗೂ ಒಳನಾಡಿನ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಕರಾವಳಿ ಮತ್ತು ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನಜೀವನ ಹದಗೆಟ್ಟಿದೆ. ಇಂದು ಕೂಡ ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆ ದಾಖಲಾಗಿದೆ. ಮುಖ್ಯವಾಗಿ ಉತ್ತರ ಕನ್ನಡದ ಕಾರವಾರ ಹಾಗೂ ಮಂಕಿ, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ತಲಾ 11 ಸೆಂಟಿಮೀಟರ್ ಭಾರಿ ಮಳೆಯಾಗಿದೆ. ಉಳಿದಂತೆ ಅಂಕೋಲಾದಲ್ಲಿ 10 ಸೆಂ.ಮೀ, ಬೆಳ್ತಂಗಡಿ ಹಾಗೂ ಧರ್ಮಸ್ಥಳದಲ್ಲಿ ತಲಾ 8 ಸೆಂ.ಮೀ ಮತ್ತು ಮಂಗಳೂರು, ಸುಬ್ರಹ್ಮಣ್ಯ, ಸುಳ್ಯ, ಉಪ್ಪಿನಂಗಡಿಯಲ್ಲಿ ತಲಾ 7 ಸೆಂ.ಮೀ ಮಳೆಯಾಗಿರುವುದು ವರದಿಯಾಗಿದೆ.
ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಇಂದು ರಾಜ್ಯದಾದ್ಯಂತ ಮಳೆಯ ಪ್ರಭಾವ ಇರಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಕರಾವಳಿ ಜನತೆ ಎಚ್ಚರದಿಂದ ಇರಲು ಸೂಚಿಸಲಾಗಿದೆ.
ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಇಲ್ಲೂ ಸಹ ಬಿರುಗಾಳಿಯ ತೀವ್ರತೆ ಹೆಚ್ಚಿರಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೊಡಗು, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಹಲವೆಡೆ ಸಾಧಾರಣ ಮಳೆಯಾಗಲಿದೆ.
ದೇಶಾದ್ಯಂತ ಮುಂಗಾರು ಮಾರುತಗಳು ವೇಗವಾಗಿ ಮುನ್ನುಗ್ಗುತ್ತಿದ್ದು, ದೆಹಲಿ, ಉತ್ತರ ಪ್ರದೇಶ, ಹರಿಯಾಣ ಹಾಗೂ ಪಂಜಾಬ್ ಪ್ರಾಂತ್ಯಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿವೆ. ಇದರ ನಡುವೆ, ವಾಯುವ್ಯ ಬಂಗಾಳ ಕೊಲ್ಲಿ ಮತ್ತು ಒಡಿಶಾ ಕರಾವಳಿ ಭಾಗದಲ್ಲಿ ಹೊಸದಾಗಿ ವಾಯುಭಾರ ಕುಸಿತ ಉಂಟಾಗಿದೆ. ಇದು ಮುಂದಿನ 2-3 ದಿನಗಳಲ್ಲಿ ಮತ್ತಷ್ಟು ಬಲಗೊಳ್ಳಲಿದ್ದು, ರಾಜ್ಯದಲ್ಲಿ ಮುಂಗಾರು ಇನ್ನಷ್ಟು ಚುರುಕಾಗಲು ಕಾರಣವಾಗಲಿದೆ. ಜೊತೆಗೆ ದಕ್ಷಿಣ ಗುಜರಾತ್‌ನಿಂದ ಕರ್ನಾಟಕ ಕರಾವಳಿಯವರೆಗೆ ವಾಯುಭಾರ ತೀವ್ರತೆ ಮುಂದುವರಿದಿದೆ.
ಕರಾವಳಿ ತೀರದಲ್ಲಿ ಕಡಲಿನ ಅಲೆಗಳ ಅಬ್ಬರ ಜೋರಾಗಿದೆ. ಜುಲೈ 5 ರವರೆಗೆ ಸಮುದ್ರದಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಕೆಲವೊಮ್ಮೆ ಇದರ ವೇಗ 60 ಕಿ.ಮೀ ತಲುಪುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಯಾವುದೇ ಕಾರಣಕ್ಕೂ ಈ ಅವಧಿಯಲ್ಲಿ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.








