ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರು ಸಲ್ಲಿಸುವ ಪಂಚಾಮೃತ ಮಹಾಭಿಷೇಕ ಸೇವೆಗೆ ₹6 ಸಾವಿರ ಇದ್ದ ದರವನ್ನು ₹11 ಸಾವಿರಕ್ಕೆ ಹೆಚ್ಚಿಸಲಾಗಿದೆ. ಸುಮಾರು ಏಳು ವರ್ಷಗಳಿಂದ ಸೇವೆಯ ದರ ಹೆಚ್ಚಳ ಆಗಿರಲಿಲ್ಲ. ಪೂಜಾ ಸಾಮಗ್ರಿಗಳ ವೆಚ್ಚ ಹೆಚ್ಚಿದ್ದರಿಂದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ಭಕ್ತರಿಗೆ ಬೆಳ್ಳಿರಥ ಸೇವೆಗೆ ಇದೀಗ ಅವಕಾಶ ಕಲ್ಪಿಸಲಾಗಿದೆ. ಈ ಸೇವೆಗೆ ₹ 12ಸಾವಿರ ದರ ನಿಗದಿಪಡಿಸಲಾಗಿದೆ. ಈ ಹಿಂದೆ ಸರ್ಕಾರದಿಂದ ಅಗತ್ಯ ಅನುಮತಿ ದೊರೆಯದ ಕಾರಣ ಬೆಳ್ಳಿರಥ ಸೇವೆ ಆರಂಭಿಸಲು ಸಾಧ್ಯವಾಗಿರಲಿಲ್ಲ.
ಬೆಳ್ಳಿ ರಥೋತ್ಸವ ಸೇವೆಯನ್ನು ಕಾರ್ತಿಕ ಮಾಸದ ಶುದ್ಧ ಷಷ್ಠಿಯಿಂದ ಜೇಷ್ಠ ಮಾಸದ ಶುದ್ಧ ಷಷ್ಠಿಯ ತನಕ ಪ್ರತಿ ತಿಂಗಳ ಶುದ್ಧ ಬಿದಿಗೆ, ಬಹುಳ ಬಿದಿಗೆ, ಶುದ್ಧ ಚೌತಿ, ಬಹುಳ ಚೌತಿ, ಶುದ್ಧ ಷಷ್ಠಿ, ಬಹುಳ ಷಷ್ಠಿ, ಶುದ್ಧ ನವಮಿ, ಬಹುಳ ನವಮಿ, ಶುದ್ಧ ಚತುರ್ದಶಿ, ಬಹುಳ ಚತುರ್ದಶಿಯ ಈ 10 ದಿನಗಳಲ್ಲಿ ಸಲ್ಲಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.









