ಸುಳ್ಯ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಖಾಲಿ ಖಾಲಿ| ಶೇ.90ರಷ್ಟು ಸಿಬ್ಬಂದಿ ‌ಕೊರತೆ; ಕರ್ತವ್ಯ ನಿರ್ವಹಣೆಯೇ ಸವಾಲು

ಸಮಗ್ರ ನ್ಯೂಸ್: ಸುಳ್ಯ ತಾಲ್ಲೂಕಿನ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಪಶು ಆಸ್ಪತ್ರೆಯಲ್ಲಿ ವೈದ್ಯರು ಸೇರಿ ಶೇ 90ರಷ್ಟು ಹುದ್ದೆಗಳು ಖಾಲಿ ಇದ್ದು, ಇಲಾಖೆಯ ಕೆಲಸ ನಿರ್ವಹಣೆಗೆ ತೊಂದರೆ ಆಗಿದೆ. ಸುಳ್ಯ ತಾಲ್ಲೂಕು ಪಶು ವೈದ್ಯಕೀಯ ಇಲಾಖೆಗೆ 53 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ ನಾಲ್ವರು ಪಶು ವೈದ್ಯರು ಮತ್ತು ಒಬ್ಬರು ವಾಹನ ಚಾಲಕ ಹುದ್ದೆಗಳನ್ನು ಹೊರತುಪಡಿಸಿ ಉಳಿದ 48 ಹುದ್ದೆಗಳು ಖಾಲಿ ಇವೆ.

Ad Widget ... .. Ad Widget .

ತಾಲ್ಲೂಕಿನಲ್ಲಿ 20,300 ಹಸುಗಳು, 43 ಎಮ್ಮೆಗಳು 2,700 ಮೇಕೆಗಳು, 15 ಕುರಿಗಳು, 1,150 ಹಂದಿಗಳು ಸುಮಾರು 20 ಸಾವಿರ ನಾಯಿಗಳು, 4.17 ಲಕ್ಷ ಕೋಳಿಗಳು ಸೇರಿ 4.5 ಲಕ್ಷಕ್ಕೂ ಅಧಿಕ ಜಾನುವಾರುಗಳು ಇವೆ. ಸಹಾಯಕ ನಿರ್ದೇಶಕರ ಹುದ್ದೆಯೇ ಖಾಲಿ ಇದ್ದು, ಪಶು ವೈದ್ಯರಿಗೆ ಕನಿಷ್ಠ ಎರಡೆರಡು ಸಂಸ್ಥೆಗಳ ಹೆಚ್ಚುವರಿ ಕರ್ತವ್ಯ ವಹಿಸಲಾಗಿದೆ.

Ad Widget

ತಾಲ್ಲೂಕು ಮಟ್ಟದ ಪಶುವೈದ್ಯಕೀಯ ಆಸ್ಪತ್ರೆ, ಪಂಜದಲ್ಲಿ ಹೋಬಳಿ ಮಟ್ಟದ ಪಶು ವೈದ್ಯಕೀಯ ಆಸ್ಪತ್ರೆ, ಅರಂತೋಡು, ಬೆಳ್ಳಾರೆ, ಕಳಂಜ, ಗುತ್ತಿಗಾರಿನ ಪಶು ಚಿಕಿತ್ಸಾಲಯಗಳಿಗೆ ವೈದ್ಯರೇ ಮುಖ್ಯಸ್ಥರಾಗಿದ್ದಾರೆ. ಮಂಡೆಕೋಲು, ಮರ್ಕಂಜ ಕುಕ್ಕುಜಡ್ಕ, ಕಲ್ಮಡ್ಕ, ಕೊಡಿಯಾಲ, ಕೊಲ್ಲಮೊಗ್ರಿನಲ್ಲಿ ಪಶು ವೈದ್ಯಕೀಯ ಪರೀಕ್ಷಕರು ಮುಖ್ಯಸ್ಥರಾಗಿರಬೇಕಾದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು. ಈ ಪೈಕಿ ಸುಳ್ಯ, ಬೆಳ್ಳಾರೆ, ಗುತ್ತಿಗಾರು, ಕಳಂಜದಲ್ಲಿ ತಲಾ ಒಬ್ಬರು ಪಶು ವೈದ್ಯರು ಮತ್ತು ಸುಳ್ಯ ಪಶು ಆಸ್ಪತ್ರೆಯಲ್ಲಿ ಒಬ್ಬರು ವಾಹನ ಚಾಲಕ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಲ್ಲೂಕು ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರ ಹುದ್ದೆ ಮತ್ತು ಅರಂತೋಡು ಪಶು ಚಿಕಿತ್ಸಾಲಯವನ್ನು ಡಾ.ನಿತಿನ್ ಪ್ರಭು ಅವರಿಗೆ ಪ್ರಭಾರವಾಗಿ, ಪಶು ಆಸ್ಪತ್ರೆ ಸುಳ್ಯದ ಚಿಕಿತ್ಸಾ ವಿಭಾಗ ಅವರ ಮೂಲ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ.

ತಾಲ್ಲೂಕು ವಿಸ್ತರಣಾಧಿಕಾರಿಯ ಹೆಚ್ಚುವರಿ ಪ್ರಭಾರವನ್ನು ಕಳಂಜದ ಪಶು ವೈದ್ಯಾಧಿಕಾರಿ ಡಾ.ಮೇಘಶ್ರೀ ಅವರಿಗೆ ವಹಿಸಲಾಗಿದೆ. ಪಂಜ ಪಶು ಆಸ್ಪತ್ರೆಯ ಹೆಚ್ಚುವರಿ ಪ್ರಭಾರವನ್ನು ಬೆಳ್ಳಾರೆ ಪಶುವೈದ್ಯಾಧಿಕಾರಿ ಡಾ.ಸೂರ್ಯನಾರಾಯಣ ಅವರಿಗೆ ವಹಿಸಲಾಗಿದೆ. ವಾರದಲ್ಲಿ 3 ದಿನ ಚಲಿಸುತ್ತಿದ್ದ ಸಂಚಾರ ಚಿಕಿತ್ಸಾ ಘಟಕ ಕಾರ್ಯನಿರ್ವಹಿಸಲು ಸಿಬ್ಬಂದಿ ಕೊರತೆಯಿಂದ ಸಾಧ್ಯವಾಗುತ್ತಿಲ್ಲ.

ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರತಿದಿನ 65 ರಿಂದ 80 ಜಾನುವಾರುಗಳು ಚಿಕಿತ್ಸೆಗಾಗಿ ಬರುತ್ತಿದ್ದು, ಒಬ್ಬ ವೈದ್ಯರೇ ಎಲ್ಲ ಚಿಕಿತ್ಸೆಗಳನ್ನು ನಿರ್ವಹಿಸಬೇಕಾಗಿದೆ. ಕಾಲುಬಾಯಿ ಜ್ವರ, ಚರ್ಮಗಂಟು, ಕುರಿ ಮತ್ತು ಮೇಕೆಗಳಲ್ಲಿ ಸಿಡುಬು, ಹಂದಿ ಜ್ವರ, ಕೋಳಿಗಳಲ್ಲಿ ಕೊಕ್ಕರೆ ರೋಗ ಮತ್ತು ನಾಯಿಗಳಲ್ಲಿ ಹುಚ್ಚುನಾಯಿ ರೋಗಗಳಿಗೆ ವಿವಿಧ ಹಂತಗಳಲ್ಲಿ ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದು, ಸಿಬ್ಬಂದಿ ಕೊರತೆಯಿಂದ ಹಸು ಎಮ್ಮೆಗಳಿಗೆ ಮನೆ ಮನೆ ಭೇಟಿ ನೀಡಿ ಲಸಿಕೆಗಳನ್ನು ನೀಡುವುದು ದೊಡ್ಡ ಸವಾಲಾಗಿದೆ.

ಕೃಪೆ: ಪ್ರಜಾವಾಣಿ ಮಂಗಳೂರು

Leave a Comment

Your email address will not be published. Required fields are marked *