ಸಮಗ್ರ ನ್ಯೂಸ್: 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 30 ರನ್‌ಗಳಿಂದ ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್, ಈ ಬಾರಿ ಐಪಿಎಲ್‌ನ 4ನೇ ತಂಡವಾಗಿ ಪ್ಲೇ-ಆಫ್‌ಗೆ ಅಧಿಕೃತ ಪ್ರವೇಶ ಪಡೆದಿದೆ. ಇದರೊಂದಿಗೆ ಪಂಜಾಬ್ ಕಿಂಗ್ಸ್, ಕೋಲ್ಕತಾ ತಂಡಗಳ ಕನಸು ಭಗ್ನಗೊಂಡಿತು. ರಾಯಲ್ಸ್ 14 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 16 ಅಂಕ ಸಂಪಾದಿಸಿದರೆ, ಮುಂಬೈ 10 ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿತು.
ಪ್ಲೇ-ಆಫ್ ಪ್ರವೇಶಿಸಬೇಕಿದ್ದರೆ ರಾಯಲ್ಸ್‌ಗೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಆರಂಭಿಕ ಬ್ಯಾಟರ್‌ಗಳ ವೈಫಲ್ಯದ ಹೊರತಾಗಿಯೂ ತಂಡ 8 ವಿಕೆಟ್‌ಗೆ 205 ರನ್ ಕಲೆಹಾಕಿತು. ವೈಭವ್(4) ಮಿಂಚಲಿಲ್ಲ. ಆದರೆ ಧ್ರುವ್ ಜುರೆಲ್ 38, ಜೈಸ್ವಾಲ್ 27 ರನ್ ಗಳಿಸಿದರು. ನಿರ್ಣಾಯಕ ಹಂತದಲ್ಲಿ ದಸುನ್ ಶಾನಕ 15 ಎಸೆತಕ್ಕೆ 29, ಜೋಫ್ರಾ ಆರ್ಚರ್ 15 ಎಸೆತಕ್ಕೆ 32, ಜಡೇಜಾ ಔಟಾಗದೆ 19 ರನ್ ಸಿಡಿಸಿದ್ದರಿಂದ ತಂಡ 200ರ ಗಡಿ ದಾಟಿತು.
ದೊಡ್ಡ ಗುರಿ ಬೆನ್ನತ್ತಿದ ಮುಂಬೈ, ಸೂರ್ಯಕುಮಾರ್ ಹೋರಾಟದ ಹೊರತಾಗಿಯೂ 9 ವಿಕೆಟ್ ನಷ್ಟದಲ್ಲಿ 175 ರನ್ ಗಳಿಸಿ ಸೋಲೊಪ್ಪಿಕೊಂಡಿತು. ರೋಹಿತ್ ಸೊನ್ನೆ ಸುತ್ತಿದರು. ಆದರೆ ಸೂರ್ಯಕುಮಾರ್ 42 ಎಸೆತಕ್ಕೆ 60, ವಿಲ್ ಜ್ಯಾಕ್ಸ್ 18 ಎಸೆತಕ್ಕೆ 33, ಹಾರ್ದಿಕ್ 15 ಎಸೆತಕ್ಕೆ 34 ರನ್ ಗಳಿಸಿದರು. ಕೊನೆಯಲ್ಲಿ ಸತತ ವಿಕೆಟ್ ಕಳೆದುಕೊಂಡ ಮುಂಬೈ ತಂಡ ರಾಯಲ್ಸ್‌ಗೆ ಪ್ಲೇ-ಆಫ್ ಹಾದಿಯನ್ನು ಸುಗಮಗೊಳಿಸಿತು. ಆರ್ಚರ್ 17 ರನ್ ನೀಡಿ 3 ವಿಕೆಟ್ ಕಿತ್ತರು.







