ಸಮಗ್ರ ನ್ಯೂಸ್: ಕಪ್ಪೆಚಿಪ್ಪು ತೆಗೆಯಲು ಹೋಗಿ ಒಂದೇ ಕುಟುಂಬದ ಎಂಟು ಮಂದಿ ದುರ್ಮರಣಕ್ಕೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ತಟ್ಟೆಹಕ್ಕಲು ಕಡಲ ತೀರದಲ್ಲಿ ಸಂಭವಿಸಿದೆ.
ಮೃತದೇಹಗಳು ಅಳ್ವೆಕೋಡಿ ಸಮೀಪ ಪತ್ತೆಯಾಗಿದ್ದು, 1. ಲಕ್ಷ್ಮಿ ಮಹಾದೇವ ನಾಯ್ಕ (42),2. ಉಮೇಶ ನಾಯ್ಕ (30).3. ಲಕ್ಷ್ಮಿ ನಾಯ್ಕ (30).4. ಲಕ್ಷ್ಮಿ ಅಣ್ಣಪ್ಪ ನಾಯ್ಕ (60).5. ಲಕ್ಷ್ಮಿ ಶಿವರಾಮ ನಾಯ್ಕ (49)6. ಜ್ಯೋತಿ ನಾಗಪ್ಪ ನಾಯ್ಕ (34).7. ಮಾಲತಿ ನಾಯ್ಕ (38).8. ಮಾಸ್ತಮ್ಮ ನಾಯ್ಕ ಎಂದು ಗುರುತಿಸಲಾಗಿದೆ.
ಸ್ಥಳೀಯ ಪೊಲೀಸರ ಮಾಹಿತಿ ಪ್ರಕಾರ, ಮೃತಪಟ್ಟವರೆಲ್ಲರೂ ಕಪ್ಪೆ ಚಿಪ್ಪು ಆರಿಸಲು ನದಿಗೆ ಇಳಿದಿದ್ದರು. ಸುರಕ್ಷತೆಯ ದೃಷ್ಟಿಯಿಂದ ಇವರೆಲ್ಲರೂ ಪರಸ್ಪರ ಕೈ ಹಿಡಿದುಕೊಂಡು ಸಾಗುತ್ತಿದ್ದರು ಎನ್ನಲಾಗಿದೆ. ಆದರೆ, ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಹೆಚ್ಚಾಗಿತ್ತು. ಇದರ ಜೊತೆಗೆ ಸಮುದ್ರದ ಅಲೆಗಳ ಅಬ್ಬರವೂ ಹೆಚ್ಚಾಗಿದ್ದರಿಂದ ನದಿಯ ನೀರಿನ ಮಟ್ಟ ದಿಢೀರನೆ ಏರಿಕೆಯಾಗಿದೆ. ಪರಿಣಾಮವಾಗಿ, ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಇವರೆಲ್ಲರೂ ಮುಳುಗಿದ್ದಾರೆ ಎಂದು ಶಂಕಿಸಲಾಗಿದೆ.
ಇಬ್ಬರ ರಕ್ಷಣೆ, ಕಣ್ಮರೆಯಾದವರಿಗಾಗಿ ಹುಡುಕಾಟ
ಈ ಭೀಕರ ದುರಂತದಲ್ಲಿ ನಾಗರತ್ನಾ ಮತ್ತು ಮಹಾದೇವಿ ಎಂಬ ಇಬ್ಬರು ಮಹಿಳೆಯರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ನದಿಯಲ್ಲಿ ಇನ್ನೂ ಕೆಲವು ಜನರು ಕಣ್ಮರೆಯಾಗಿರುವ ಆತಂಕ ವ್ಯಕ್ತವಾಗಿದ್ದು, ಸ್ಥಳದಲ್ಲಿ ಪರಿಶೋಧನೆ ಮತ್ತು ಪತ್ತೆ ಕಾರ್ಯ ಚುರುಕಿನಿಂದ ಸಾಗುತ್ತಿದೆ. ಘಟನಾ ಸ್ಥಳಕ್ಕೆ ಭಟ್ಕಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ:
ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆ. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇನ್ನೂ ಕೆಲವರು ಈ ದುರ್ಘಟನೆಯಲ್ಲಿ ಕಾಣೆಯಾಗಿರುವ ಮಾಹಿತಿಯಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಕಾಣೆಯಾದವರು ಬದುಕಿಬಂದು ತಮ್ಮವರನ್ನು ಕೂಡಿಕೊಳ್ಳಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ ಹೇಳಿದ್ದಾರೆ.






