ಕಾರವಾರ: ಸೊಸೆಯ ಜೊತೆಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಅತ್ತೆ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಕಾರವಾರ ತಾಲೂಕಿನ ಆರ್ಗಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು ಅತ್ತೆ-ಸೊಸೆ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ನಗರದ ಬಾಡಾದ ನಂದನಗದ್ದಾ ನಿವಾಸಿ ಶಾಲಿನಿ ನಾಯ್ಕ ಮೃತಪಟ್ಟ ಮಹಿಳೆ. 73 ವರ್ಷದ ಈಕೆ ತನ್ನ ಸೊಸೆ ವೈಶಾಲಿ ನಾಯ್ಕ ಜೊತೆ ಸ್ಕೂಟಿ ಹಿಂಬದಿ ಕುಳಿತು ಅರ್ಗಾದ ನೌಕಾನೆಲೆ ಬಳಿ ಕೆಲ ಸಾಮಗ್ರಿ ತರಲು ತೆರಳಿದ್ದರು ಎನ್ನಲಾಗಿದೆ.
ಅಂಗಡಿಯಿಂದ ಸಾಮಗ್ರಿ ಖರೀದಿಸಿ ವಾಪಸ್ಸಾಗುತ್ತಿದ್ದ ವೇಳೆ ನೌಕಾನೆಲೆ ಗೇಟ್ ಬಳಿ ರಸ್ತೆಯಲ್ಲಿ ಸ್ಕೂಟಿಯಿಂದ ಆಯ ತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ. ಈ ವೇಳೆ ಗಂಭೀರ ಗಾಯಗೊಂಡ ಶಾಲಿನಿ ಮೃತಪಟ್ಟಿದ್ದಾಳೆ. ಇನ್ನು ಘಟನೆ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಹನ ಚಲಾವಣೆ ಸಂದರ್ಭದಲ್ಲಿ ನಿಯಮ ಪಾಲನೆ ಹಾಗೂ ಹೆಲ್ಮೆಟ್ ಧರಿಸದಿರುವುದು ಕಾರಣ ಎನ್ನಲಾಗಿದೆ.