ಸಮಗ್ರ ನ್ಯೂಸ್: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಇಬ್ಬರು ವಲಸಿಗರನ್ನು ಪಣಂಬೂರು ಠಾಣೆಯ ಪೊಲೀಸರು ಪತ್ತೆಹಚ್ಚಿ, ವಶಕ್ಕೆ ಪಡೆದಿದ್ದಾರೆ.
‘ಪಣಂಬೂರು ಕಡಲ ಕಿನಾರೆ ಬಳಿಯ ರೆಸ್ಟೋರಂಟ್ ಒಂದರಲ್ಲಿ ಬಾಂಗ್ಲಾದೇಶದ ಇಬ್ಬರು ಅಕ್ರಮ ವಲಸಿಗರು ಕೆಲಸ ಮಾಡುತ್ತಿರುವ ಬಗ್ಗೆ ಪಣಂಬೂರು ಠಾಣೆಯ ಇನ್‌ಸ್ಪೆಕ್ಟರ್ ಸಲೀಂ ಅಬ್ಬಾಸ್ ಅವರಿಗೆ ಮಾಹಿತಿ ಬಂದಿತ್ತು.
ಅವರು, ಸಹ ಸಿಬ್ಬಂದಿಯೊಂದಿಗೆ ಆ ರೆಸ್ಟೋರಂಟ್‌ಗೆ ದಾಳಿ ಮಾಡಿದ್ದರು. ರೆಸ್ಟೋರಂಟ್‌ನಲ್ಲಿ ಕೆಲಸಕ್ಕಿದ್ದ ಅಶಿಕುಲ್ ಇಸ್ಲಾಂ ಮತ್ತು ಎಂ.ಡಿ ಅಮೀನ್ ಬಾಂಗ್ಲಾದೇಶದ ಪ್ರಜೆಗಳು ಎಂಬುದು ಗೊತ್ತಾಗಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಯಾವುದೇ ಅಧಿಕೃತ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವುದು ಗೊತ್ತಾಗಿತ್ತು’ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.









