ಸಮಗ್ರ ನ್ಯೂಸ್: ಇಬ್ಬರು ಮಹಿಳೆಯರೊಂದಿಗೆ ಬಂದ ಮೂವರ ತಂಡ ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಮಳಿಗೆಯೊಂದರಿಂದ ಸುಮಾರು ₹ 3 ಲಕ್ಷ ಮೌಲ್ಯದ ಚಿನ್ನದ ಬಳೆ ಕಳವು ಮಾಡಿದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ.
ನಗರದ ಹೆಗ್ಡೆ ಆರ್ಕೇಡ್ನಲ್ಲಿರುವ ‘ಆರ್.ಕೆ.ಜ್ಯುವೆಲ್ಲರ್ಸ್’ ಚಿನ್ನಾಭರಣ ಮಳಿಗೆಯಲ್ಲಿ ಕಳವು ನಡೆದಿದೆ. ಘಟನೆಗೆ ಸಂಬಂಧಿಸಿ ಮಳಿಗೆಯ ಮಾಲೀಕ ಕೃಷ್ಣತ್ ನಾಮದೇವ್ ಸುರ್ವೆ ಅವರು ಪುತ್ತೂರು ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾರ್ಚ್ 30ರಂದು ವಿವಿಧ ವಿನ್ಯಾಸದ ಆಭರಣಗಳನ್ನು ತೋರಿಸುವಂತೆ ಮೂವರು ಅಪರಿಚಿತರು ಹೇಳಿದ್ದರು. ಅವರು ತಿಳಿಸಿದಂತೆ ಹಲವು ವಿನ್ಯಾಸದ ಬೇರೆ ಬೇರೆ ಚಿನ್ನದ ಬಳೆಗಳನ್ನು ತೋರಿಸಲಾಗಿತ್ತು. ಗ್ರಾಹಕರ ಸೋಗಿನಲ್ಲಿ ಬಂದಿದ್ದ ಅವರು ಆಭರಣ ಖರೀದಿಸದೆ ತೆರಳಿದ್ದರು. ಆ ಬಳಿಕ ಪರಿಶೀಲಿಸಿದಾಗ ಅಂದಾಜು 23 ಗ್ರಾಂ ತೂಕದ ಚಿನ್ನದ ಬಳೆಯೊಂದು ಕಳವಾಗಿರುವುದು ಗೊತ್ತಾಗಿದೆ ಎಂದು ಕೃಷ್ಣತ್ ನಾಮದೇವ್ ಸುರ್ವೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






