ಸಮಗ್ರ ನ್ಯೂಸ್: ರಾಜ್ಯದ ಮಹಿಳಾ ನೌಕರರಿಗೆ ಒಂದು ದಿನ ‘ಋತುಚಕ್ರ ರಜೆ’ ಮಂಜೂರು ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕಾರ್ಖಾನೆಗಳ ಕಾಯ್ದೆ, 1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961, ತೋಟ ಕಾರ್ಮಿಕರ ಕಾಯ್ದೆ, 1951, ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗ ಮತ್ತು ಷರತ್ತುಗಳು) ಕಾಯ್ದೆ, 1966 ಹಾಗೂ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ, 1961ರಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 52 ವರ್ಷದ ವಯೋಮಿತಿಯ ಎಲ್ಲಾ ಖಾಯಂ/ಗುತ್ತಿಗೆ/ ಹೊರಗುತ್ತಿಗೆ ಮಹಿಳಾ ನೌಕರರಿಗೆ ಅವರ ಆರೋಗ್ಯ, ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿ ಅವರ ಮನೋಸ್ಥೆರ್ಯವನ್ನು ಹೆಚ್ಚಿಸುವ ಸದುದ್ದೇಶದಿಂದ, ಅವರ ಋತುಚಕ್ರದ ಸಮಯದಲ್ಲಿ ಪ್ರತಿ ಮಾಸಿಕ ಒಂದು ದಿನದ ರಜೆಯಂತೆ ವಾರ್ಷಿಕ 12 ದಿನಗಳ ವೇತನ ಸಹಿತ ರಜೆಯ ಸೌಲಭ್ಯವನ್ನು ಸಂಬಂಧಿಸಿದ ಉದ್ಯೋಗದಾತರು ಒದಗಿಸುವಂತೆ ಆದೇಶಿಸಿದೆ.
ಪ್ರಸ್ತಾಪಿತ ಋತುಚಕ್ರ ರಜಾನೀತಿಯ ಪರವಾಗಿ ಹೆಚ್ಚಿನ ಅಭಿಪ್ರಾಯಗಳು ಸ್ವೀಕೃತಗೊಂಡಿರುವುದರಿಂದ ಹಾಗೂ ಸದರಿ ರಜಾನೀತಿಯನ್ನು ರೂಪಿಸುವುದರಿಂದ ವಿವಿಧ ಉದ್ದಿಮೆಗಳಲ್ಲಿ ದುಡಿಯುವ ಮಹಿಳಾ ನೌಕರರ ಆರೋಗ್ಯ ಮತ್ತು ಯೋಗಕ್ಷೇಮ ಉತ್ತೇಜಿಸಲ್ಪಟ್ಟು, ಅವರ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚುತ್ತದೆ. ಇದರಿಂದಾಗಿ ಉತ್ಪಾದನಾ ಚಟುವಟಿಕೆಗಳಲ್ಲಿ ಮಹಿಳಾ ನೌಕರರ ಭಾಗವಹಿಸುವಿಕೆ ಹೆಚ್ಚಿ ದೇಶದ ಉತ್ಪಾದನೆ ಹೆಚ್ಚಲು ಕಾರಣವಾಗುತ್ತದೆ. ಇದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಹಾಗೂ ಋತುಚಕ್ರದ ರಜಾನೀತಿಯನ್ನು ರೂಪಿಸುವುದರಿಂದ ಮಹಿಳಾ ದುಡಿಮೆಗೆ ಸಂಬಂಧಿಸಿದಂತೆ ಕರ್ನಾಟಕವು ಒಂದು ಜಾಗತಿಕ ಉತ್ತಮ ಅಭ್ಯಾಸವನ್ನು ಹೊಂದಿದಂತಾಗುತ್ತದೆ ಎಂದು ಆಯುಕ್ತರು, ಕಾರ್ಮಿಕ ಇಲಾಖೆ, ಇವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಸಚಿವ ಸಂಪುಟ ಟಿಪ್ಪಣಿಯಲ್ಲಿ ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, MNC ಗಳು, IT ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ಋತುಚಕ್ರ ರಜೆ ನೀತಿ, 2025 ಅನ್ನು ಜಾರಿಗೆ ತರಲು ಸಚಿವ ಸಂಪುಟವು ಅನುಮೋದಿಸಿರುತ್ತದೆ.







