ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತೆ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಅರೆ ಪ್ರಕಾಶ್ ರಾಜ್ ಮತ್ತೆ ಮದುವೆಯಾದ್ರಾ ಅಂತ ಯೋಚಿಸಬೇಡಿ. ಅವರು ಇದೀಗ ತಮ್ಮ ಮಗ ವೇದಾಂತ್ ಆಸೆಯಂತೆ ಪತ್ನಿಯೊಂದಿಗೆ ಮತ್ತೆ ಮದುವೆಯಾಗಿದ್ದಾರೆ.
ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ದಂಪತಿ ನಿನ್ನೆ (ಆಗಸ್ಟ್ 24) ತಮ್ಮ 11ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ಇವರ ಪುತ್ರ ವೇದಾಂತ್ಗೆ ತನ್ನ ತಂದೆ-ತಾಯಿ ಮದುವೆಯನ್ನು ನೋಡುವ ಬಯಕೆ ಇತ್ತಂತೆ. ಅದನ್ನು ಅಪ್ಪ-ಅಮ್ಮನ ಬಳಿ ಹೇಳಿಕೊಂಡಿದ್ದ. ಮಗನ ಆಸೆಯಂತೆ ಪ್ರಕಾಶ್ ರಾಜ್ ದಂಪತಿ ತಮ್ಮ ವೆಡ್ಡಿಂಗ್ ಆಯನಿವರ್ಸರಿ ದಿನ ಮತ್ತೆ ಮದುವೆಯಾಗಿದ್ದಾರೆ.
ಈ ಕುರಿತು ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿ, ಫೋಟೋ ಹಂಚಿಕೊಂಡಿದ್ದಾರೆ. ನಾವಿಂದು ಇನ್ನೊಮ್ಮೆ ಮದುವೆ ಮಾಡಿಕೊಂಡಿದ್ದೇವೆ. ಏಕೆಂದರೆ ನಮ್ಮ ಮದುವೆ ನೋಡಲು ಮಗ ವೇದಾಂತ್ ತುಂಬ ಆಸೆಪಟ್ಟಿದ್ದ. ಕುಟುಂಬದೊಂದಿಗೆ ತುಂಬ ಉತ್ತಮ ಸಮಯ ಕಳೆದೆ ಎಂದು ಬರೆದುಕೊಂಡಿದ್ದಾರೆ. ನಿನ್ನೆ ನಡೆದ ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ಮದುವೆ ಸಂಭ್ರಮದಲ್ಲಿ ಪ್ರಕಾಶ್ ರಾಜ್ ಪುತ್ರಿಯರಾದ ಮೇಘನಾ ಮತ್ತು ಪೂಜಾ ಕೂಡ ಇದ್ದರು. ಇವರು ಪ್ರಕಾಶ್ ರಾಜ್ ಮೊದಲನೇ ಪತ್ನಿಯ ಮಕ್ಕಳು.