ವಿದ್ಯಾಭ್ಯಾಸಕ್ಕೆ ಬಡತನ ಅಡ್ಡಿ: ಯುವತಿ ಆತ್ಮಹತ್ಯೆ

Ad Widget ... ..

ದಾವಣಗೆರೆ: ಮನೆಯಲ್ಲಿ ಬಡತನದ ಕಾರಣದಿಂದ ಮುಂದೆ ಓದಿಸುವುದು ಕಷ್ಟ ಎಂದು ತಾಯಿ ಹೇಳಿದ್ದರಿಂದ ಮನನೊಂದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಉಜ್ಜಪ್ಪ ವಡೇರಹಳ್ಳಿಯಲ್ಲಿ ನಡೆದಿದೆ.

Ad Widget

ಉಜ್ಜಪ್ಪ ವಡೇರಹಳ್ಳಿಯಲ್ಲಿ ಗ್ರಾಮದ ನಾಗರಾಜಪ್ಪ ಮತ್ತು ಚಂದ್ರಮ್ಮನ ಅವರ ಪುತ್ರಿ ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ದಾವಣಗೆರೆಯ ಸೀತಮ್ಮ ಪಿಯು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಓದುತ್ತಿದ್ದಳು. ಕೆಲ ದಿನಗಳ ಹಿಂದೆ ಪಿಯುಸಿ ಪಾಸ್ ಆಗಿದ್ದು, ಮುಂದೆ ಪದವಿ ವ್ಯಾಸಂಗ ಮಾಡಬೇಕು ಎನ್ನುವ ಆಸೆಯನ್ನು ಹೊಂದಿದ್ದಳು. ಆದರೆ ರಕ್ಷಿತಾ ತಂದೆ ನಾಗರಾಜಪ್ಪ ಮೂರು ವರ್ಷದ ಹಿಂದೆ ಧರ್ಮಸ್ಥಳಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದರು.

ಇದಾದ ಬಳಿಕ ತಾಯಿ ಚಂದ್ರಮ್ಮ ಕೂಲಿ ಮಾಡಿ ಮಗಳನ್ನು ಓದಿಸುತ್ತಿದ್ದರು.
ಲಾಕ್‌ಡೌನ್ ಕಾರಣ ಚಂದ್ರಮ್ಮಗೆ ಕೂಲಿ ಕೆಲಸ ಸಿಗದಂತಾಗಿದ್ದು, ಆರ್ಥಿಕ ಸಮಸ್ಯೆ ಸೃಷ್ಟಿಯಾಯಿತು. ಮನೆಯಲ್ಲಿ ಬಡತನ ಇದೆ, ಮುಂದಿನ ವಿದ್ಯಾಭ್ಯಾಸಕ್ಕೆ ಕಳುಹಿಸುವ ಶಕ್ತಿ ಇಲ್ಲ, ಮನೆಯಲ್ಲೇ ಇರುವಂತೆ ಮಗಳಿಗೆ ಹೇಳಿದ್ದಾರೆ. ಇದು ರಕ್ಷಿತಾಗೆ ಸಾಕಷ್ಟು ನೋವು ತಂದಿದ್ದು, ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
೧೦ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆಯುವ ಮೂಲಕ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಳು. ನಂತರ ದಾವಣಗೆರೆಯ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರ ನಿಲಯದಲ್ಲಿದ್ದು, ಸೀತಮ್ಮ ಕಾಲೇಜಿನ ಕಲಾ ವಿಭಾಗದಲ್ಲಿ ಪಿಯುಸಿ ಓದಿ ಶೇ.೬೦ರಷ್ಟು ಅಂಕಗಳನ್ನು ಪಡೆದಿದ್ದಳು.

ಮುಂದೆ ಬಿಎ ಅಥವಾ ಬಿಕಾಂ ಮಾಡಬೇಕೆಂಬ ಆಸೆ ಇತ್ತು. ಆದರೆ ತಾಯಿ ಚಂದ್ರಮ್ಮಗೆ ಮುಂದೆ ಓದಿಸುವಷ್ಟು ಶಕ್ತಿ ಇರಲಿಲ್ಲ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡ ರಕ್ಷಿತಾ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *