ಮಂಗಳೂರು: ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದ್ದು, ಪಾಸಿಟಿವಿಟಿ ದರ ಮತ್ತಷ್ಟು ಹೆಚ್ಚಾದ್ರೆ ಲಾಕ್ಡೌನ್ ಆಗುವ ಅಪಾಯವಿದೆ ಎಂದು ಮಂಗಳೂರಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಪಾಸಿಟಿವಿಟಿ ದರ ಶೇಕಡಾ 3 ತಲುಪಿದೆ. ಈ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಮಾಡಲಾಗಿದೆ. ಇದು ಹೆಚ್ಚಾದ್ರೆ ಲಾಕ್ ಡೌನ್ ಮಾಡುವ ಅಪಾಯವಿದೆ ಎಂದ ಅವರು, ಕೋವಿಡ್ ನಿಯಂತ್ರಣ ಮಾಡುವುದು ಆರೋಗ್ಯ ಇಲಾಖೆಯ ಜವಾಬ್ದಾರಿ. ಅದು ನಿಯಮಗಳನ್ನು ಪಾಲಿಸುವುದು ಕೂಡ ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಸದ್ಯಕ್ಕೆ ದಕ್ಷಿಣಕನ್ನಡದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಕೇರಳ ಸಂಪರ್ಕದಿಂದ ಸೋಂಕು ಹೆಚ್ಚಾಗುತ್ತಿದೆ. ಈಗಾಗಲೇ ಕೇರಳ ಗಡಿಯಲ್ಲಿ ತನಿಖೆ ಚುರುಕುಗೊಳಿಸಿದ್ದು, ಆರ್ ಟಿ ಪಿಸಿಆರ್ ನೆಗೆಟಿವ್ ವರದಿ ಇರುವವರನ್ನು ಮಾತ್ರ ಒಳ ಬಿಡಲಾಗುತ್ತಿದೆ.
ಈ ನಡುವೆ ಸುಳ್ಯದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ‘ಕೋವಿಡ್ ನಿರ್ಮೂಲನೆಗೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಹಿಂದಿನ ನಿಯಮಾವಳಿಗಳನ್ನು ಜಾರಿಗೆ ತರಲಾಗಿದೆ. ಕೇರಳ ಗಡಿಭಾಗದಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಕೇರಳದಿಂದ ಕಾಲುದಾರಿಯಾಗಿ ಈ ಭಾಗಕ್ಕೆ ಜನರು ಓಡಾಡುತ್ತಾರೆಂಬ ಮಾಹಿತಿ ಇದೆ. ಇದನ್ನು ತಡೆಯಲು ಜನರೇ ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದರು.
ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇದ್ದು, ಯಾವುದೇ ಸೇವೆಗಳು ನಡೆಯುವುದಿಲ್ಲ. ಕೋವಿಡ್‌ನ ಈ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚು ಸಂಖ್ಯೆಯಲ್ಲಿ ಬರಬಾರದು ಎಂದು ಹೇಳಿದ್ದಾರೆ.






