ಬೆಂಗಳೂರು: ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ 13 ದಿನಗಳು ಕಳೆದಿದೆ. ಆದರೆ ಯಡಿಯೂರಪ್ಪ ತಮ್ಮ ಸಿಎಂ ಅಧಿಕೃತ ನಿವಾಸ ಕಾವೇರಿಯನ್ನು ಈವರೆಗೂ ತೊರೆದಿಲ್ಲ. ಅದೃಷ್ಟದ ನಿವಾಸ ಎಂದೇ ರಾಜಕೀಯ ವಲಯದಲ್ಲಿ ಪರಿಗಣಿಸಲ್ಪಟ್ಟಿರುವ ಕಾವೇರಿಯನ್ನು ತೊರೆಯಲು ಯಡಿಯೂರಪ್ಪ ಮನಸ್ಸು ಮಾಡಿರದೆ ಇರುವುದು ಕುತೂಹಲ ಕೆರಳಿಸಿದೆ.
ಕಾವೇರಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ. ಅದರ ಪಕ್ಕದಲ್ಲೇ ಸಿಎಂ ಗೃಹ ಕಚೇರಿ ಕೃಷ್ಣಾ ಇದೆ. ಸಹಜವಾಗಿ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕಾರ ಮಾಡಿದವರು ಈ ನಿವಾಸದಲ್ಲಿ ವಾಸ್ತವ್ಯ ಹೂಡುತ್ತಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕಾವೇರಿ ನಿವಾಸದಲ್ಲೇ ಉಳಿದುಕೊಂಡಿದ್ದರು. ಬಳಿಕ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಸಿಎಂ ಎಚ್.ಡಿ ಕುಮಾರಸ್ವಾಮಿ ಖಾಸಗಿ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದರೆ ಸಿದ್ದರಾಮಯ್ಯನವರು ಕಾವೇರಿ ನಿವಾಸದಲ್ಲಿ ವಾಸ್ತವ್ಯ ಮುಂದುವರಿಸಿದ್ದರು.
ಸಮ್ಮಿಶ್ರ ಸರ್ಕಾರದ ಪತನವಾದ ಬಳಿಕವೂ ಸಿದ್ದರಾಮಯ್ಯ ಅವರ ಕಾವೇರಿ ತೊರೆಯಲು ಮನಸ್ಸು ಮಾಡಿರಲಿಲ್ಲ. ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಅವರು ಧವಳಗಿರಿಯಲ್ಲಿ ವಾಸ್ತವ್ಯ ಹೂಡಿ ಅಲ್ಲಿಂದಲೇ ಗೃಹ ಕಚೇರಿ ಕೃಷ್ಣಾಗೆ ಆಗಮಿಸುತ್ತಿದ್ದರು. ಆದರೆ ಇದು ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂಬ ಕಾರಣಕ್ಕಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬೇರೆ ನಿವಾಸವನ್ನು ನೀಡಿ ಕಾವೇರಿಗೆ ಯಡಿಯೂರಪ್ಪ ಶಿಫ್ಟ್ ಆದರು.
ಇದೀಗ ಯಡಿಯೂರಪ್ಪ ಅಧಿಕಾರ ಕಳೆದುಕೊಂಡು ಬಸವರಾಜ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ತಾವು ಈ ಹಿಂದೆ ಇದ್ದ ನಿವಾಸದಲ್ಲೇ ತಮ್ಮ ವಾಸ್ತವ್ಯವನ್ನು ಮುಂದುವರಿಸಿದ್ದಾರೆ, ಜೊತೆಗೆ ಅವರಿಗೆ ಬೊಮ್ಮಾಯಿ ಸರ್ಕಾರದಲ್ಲಿ ಸಂಪುಟ ದರ್ಜೆಯ ಸ್ಥಾನಮಾನವೂ ಸಿಕ್ಕಿದೆ.
ಕಾವೇರಿಯಲ್ಲಿ ವಾಸ್ತವ್ಯ ಹೂಡಿರುವ ಯಡಿಯೂರಪ್ಪ ಅವರು ಮುಂದೆ ಕಾವೇರಿಯನ್ನು ತೊರೆಯುತ್ತಾರಾ? ಅಥವಾ ಅಲ್ಲೇ ವಾಸ್ತವ್ಯಹೂಡಿ ತಮ್ಮ ರಾಜಕೀಯ ಹೋರಾಟ ಮುಂದುವರಿಸುತ್ತಾರಾ? ಎಂಬುವುದು ಕುತೂಹಲ ಕೆರಳಿಸಿದೆ. ಒಟ್ಟಿನಲ್ಲಿ ಕಾವೇರಿ ನಿವಾಸದ ಮೇಲಿನ ಮೋಹ ಸಿದ್ದರಾಮಯ್ಯ ಅವರ ಬಳಿಕ ಯಡಿಯೂರಪ್ಪ ಅವರಲ್ಲೂ ಕಾಣಿಸುತ್ತಿದೆ.







