ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾದ ಪೋಸ್ಟರ್ ಅನ್ನು ಬಾಲಿವುಡ್ ಮಂದಿ ಕಾಪಿ ಮಾಡಿದ್ದಾರೆ. ಸ್ಯಾಂಡಲ್ವುಡ್ಗೆ ಸೀಮಿತವಾಗದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದ್ದು, ಈ ಸಿನಿಮಾದ ಪೋಸ್ಟರ್ ಕಾಪಿ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.
‘ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಸುದೀಪ್ ಭಿನ್ನ ಅವತಾರ ತಾಳಿದ್ದಾರೆ. ‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಕಾರಣಕ್ಕೆ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಕೆಲ ತಿಂಗಳ ಹಿಂದೆ ರಿಲೀಸ್ ಆಗಿದ್ದ ಸಿನಿಮಾ ಪೋಸ್ಟರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಈ ಪೋಸ್ಟರ್ಅನ್ನು ಕಾಪಿ ಮಾಡುವ ಕೆಲಸವನ್ನು ಬಾಲಿವುಡ್ ಮಂದಿ ಮಾಡಿದ್ದಾರೆ.
ಪವನ್ ಕೃಪಲಾನಿ ನಿರ್ದೇಶನ ಮಾಡಿರುವ ಹಿಂದಿಯ ‘ಭೂತ್ ಪೊಲೀಸ್’ ತಂಡ ನಿತ್ಯ ಹೊಸ ಪೋಸ್ಟರ್ಗಳನ್ನು ರಿಲೀಸ್ ಮಾಡುತ್ತಿದೆ. ಹಿಂದೂ ಸಂತರನ್ನು ಬಳಕೆ ಮಾಡಿಕೊಂಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಚಿತ್ರದ ಯಾಮಿ ಗೌತಮ್ ಹಾಗೂ ಜಾಕ್ವಲೀನ್ ಫರ್ನಾಂಡೀಸ್ ಲುಕ್ ಅನಾವರಣಗೊಂಡಿದೆ. ‘ವಿಕ್ರಾಂತ್ ರೋಣ’ ಚಿತ್ರದ ಪೋಸ್ಟರ್ಗೂ ಇದಕ್ಕೂ ಸಾಮ್ಯತೆ ಇದೆ.
‘ವಿಕ್ರಾಂತ್ ರೋಣ’ ಸಿನಿಮಾದ ಪೋಸ್ಟರ್ನಲ್ಲಿ ಸುದೀಪ್ ಗುಹೆಯ ಬಳಿ ಬಲಗೈನಲ್ಲಿ ಪಂಜು ಹಾಗೂ ಎಡಗೈನಲ್ಲಿ ಛಾಟಿ ಹಿಡಿದು ನಿಂತಿದ್ದಾರೆ. ಯಾಮಿ ಗೌತಮ್ ಲುಕ್ನಲ್ಲಿ ಛಾಟಿ ಒಂದನ್ನು ಬಿಟ್ಟು ಉಳಿದೆಲ್ಲವೂ ಒಂದೇ ತೆರನಾಗಿದೆ. ಇನ್ನು, ಜಾಕ್ವಲೀನ್ ಫರ್ನಾಂಡೀಸ್ ಪೋಸ್ಟರ್ನಲ್ಲಿ ಕೈಯಲ್ಲಿ ಹಿಡಿದಿರುವ ಛಾಟಿ ವಿಕ್ರಾಂತ್ ರೋಣ ಚಿತ್ರದಲ್ಲಿ ಬಳಕೆಯಾದ ಛಾಟಿ ರೀತಿಯಲ್ಲೇ ಇದೆ.
ಈ ವಿಚಾರದ ಬಗ್ಗೆ ಈಗ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅನೇಕರು ಬಾಲಿವುಡ್ ಮಂದಿ ನಮ್ಮ ಪೋಸ್ಟರ್ ಕಾಪಿ ಮಾಡಿದ್ದಾರೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು, ಬಾಲಿವುಡ್ನವರು ಸ್ಯಾಂಡಲ್ವುಡ್ನವರನ್ನು ಅನುಸರಿಸುವಂತಾಯಿತು ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.