ಚಿಕ್ಕಮಗಳೂರು: ಮುಖ್ಯಮಂತ್ರಿ ಬದಲಾವಣೆ ಎಂಬುವುದು ಹಾಗೂ ಅರುಣ್ ಸಿಂಗ್ ವರದಿ ನೀಡಿದರು ಎನ್ನುವುದು ಎರಡೂ ಸುಳ್ಳು ಸುದ್ದಿ. ಅವರು ಯಾರೆಂದು ಪತ್ತೆ ಹಚ್ಚುವುದು ಕಷ್ಟದ ಕೆಲಸವಲ್ಲ. ಕಳ್ಳನ ಹೆಂಡತಿ ಯಾವತ್ತಿದ್ದರೂ ಡ್ಯಾಶ್ ಎಂದು ಸಿ.ಟಿ.ರವಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಿಡಿ ಕಾರಿದ್ದಾರೆ.
ತಾಲೂಕಿನ ಭದ್ರಾ ನದಿ ಬಳಿ ಕೊರೊನಾದಿಂದ ಸತ್ತವರು ಅಸ್ಥಿ ವಿಸರ್ಜನೆ ಬಳಿಕ ಮಾತನಾಡಿದ ಅವರು, ಕನ್ನಡದಲ್ಲಿ ಒಂದು ಗಾದೆ ಮಾತಿದೆ. ಕಳ್ಳನ ಹೆಂಡತಿ ಡ್ಯಾಶ್ ಅಂತೇಳಿ. ಅವರನ್ನು ಪತ್ತೆ ಹಚ್ಚುವುದು ಕಷ್ಟದ್ದೇನಲ್ಲ. ಎಷ್ಟು ದಿನ ಈ ರೀತಿ ಮುಚ್ಚಿಟ್ಟು ಸುಳ್ಳು ಸುದ್ದಿ ಹಬ್ಬಿಸಲು ಆಗುತ್ತೆ. ಒಂದು ದಿನ ಪತ್ತೆ ಆಗೇ ಆಗುತ್ತೆ. ಪಾರ್ಟಿ ಎಲ್ಲವನ್ನೂ ಗಮನಿಸುತ್ತಿರುತ್ತೆ, ಯಾವಾಗ ಯಾವ ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತದೆ ಎಂದರು.
ಉದ್ದೇಶ ಪೂರ್ವಕವಾಗೋ, ದುರುದ್ದೇಶ ಪೂರ್ವಕವಾಗೋ ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದ್ದಾರೆ. ಅದರಲ್ಲಿ ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಒಂದು ಸುಳ್ಳು ಸುದ್ದಿ. ಅರುಣ್ ಸಿಂಗ್ ವರದಿ ನೀಡಿದರು ಎಂಬುವುದು ಕೂಡ ಸುಳ್ಳು ಸುದ್ದಿ ಎಂದರು.
ಅರುಣ್ ಸಿಂಗ್ ನಾನು ಕಳೆದ 30 ವರ್ಷಗಳ ಒಡನಾಡಿಗಳು. ಅವರಿಗೆ ಫೋನ್ ಮಾಡಿ ಮಾತನಾಡಿದೆ. ಅವರು ಮೂರು ದಿನ ಕೇಂದ್ರದಲ್ಲೇ ಇಲ್ಲ. ಆದರೆ, ಕೆಲವು ಪ್ರಮುಖ ಪತ್ರಿಕೆಗಳು, ಸುದ್ದಿ ವಾಹಿನಿಗಳು ವರದಿ ನೀಡಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನ ಹಬ್ಬಿಸಿದರು. ಇದರ ಹಿಂದೆ ಯಾರದ್ದೋ ಷಡ್ಯಂತ್ರದ ಕೈವಾಡವಿರುವಂತೆ ಕಾಣುತ್ತಿದೆ ಎಂದು ನುಡಿದರು.
ನಾವು ಜನರ ಮಧ್ಯೆ ಇದ್ದು, ಕೆಲಸ ಮಾಡುವವರು. ಕ್ಷೇತ್ರಕ್ಕೆ ಬಂದರೆ ಜನರ ಜೊತೆ ಇರುತ್ತೇವೆ. ಇಲ್ಲವಾದರೆ ಸಂಘಟನೆ ಕೆಲಸದಲ್ಲಿ ಇರುತ್ತೇವೆ. ನಮಗೆ ಯೋಚನೆ ಮಾಡಲು ಪರುಸೊತ್ತು ಇರಲ್ಲ. ಒಂದಲ್ಲ ಒಂದು ಊರಲ್ಲಿ ಯಾವುದಾದರೂ ಚಟುವಟಿಕೆಯಲ್ಲಿ ಇರುತ್ತೇವೆ. ಕೆಲಸ ಇಲ್ಲದವರಿಗೆ ಈ ರೀತಿ ಸೃಷ್ಟಿ ಮಾಡುವುದೇ ಕೆಲಸವಾಗಿರುತ್ತೆ ಎಂದು
ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸಿ.ಟಿ.ರವಿ ಗರಂ ಆದರು.