ಸಮಗ್ರ ನ್ಯೂಸ್: ಬೆಂಗಳೂರಿನ ದೇವನಹಳ್ಳಿ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಕೆಟ್ಟ ಹವಾಮಾನದಿಂದಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೆ ತೊಂದರೆಯಾಗಿದೆ. ಇಂದು ಹಲವು ವಿಮಾನಗಳು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯದೆ ವಾಪಸ್ ಹೋಗಿವೆ.
ಎಂಟು ದೇಶೀಯ ವಿಮಾನಗಳು ಇಲ್ಲಿ ಇಳಿಯದೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಹೋಗಿ ಲ್ಯಾಂಡ್ ಆಗಿವೆ. ಆರು ವಿಮಾನಗಳ ಟೇಕಾಫ್ ವಿಳಂಬವಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇವನಹಳ್ಳಿಯ ಕೆಐಎಯಲ್ಲಿ ಮಂಗಳವಾರ ಸಂಜೆ 45.2 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೇವನಹಳ್ಳಿ ಹೊರತುಪಡಿಸಿ ನಗರದ ಬೇರೆ ಭಾಗಗಳಲ್ಲಿ ಇಂದು ಹೆಚ್ಚಿನ ಮಳೆಯಾಗಿಲ್ಲ. ನಿನ್ನೆ ರಾತ್ರಿ ನಗರದ ವಿವಿಧಡೆ ಸಾಕಷ್ಟು ಮಳೆಯಾಗಿ, ಬಿಸಿಲಿನ ಬೇಗೆಗೆ ತತ್ತರಿಸಿದವರಿಗೆ ತಂಪೆರೆದಿತ್ತು.
ಬೆಂಗಳೂರಿನ ದೇವನಹಳ್ಳಿಯಲ್ಲಿ ಸಡನ್ ಸುರಿದ ಮಳೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಇಳಿಯಲಾಗದೆ ಸಾಕಷ್ಟು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಸಾಕಷ್ಟು ವಿಮಾನಗಳು ವಿಳಂಬವಾಗಿರುವುದರಿಂದಲೂ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಮುಂದಿನ ಎರಡು ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಬೇಸಿಗೆಯ ಮಳೆ ಬೀಳುತ್ತೆ ಅಂತ ಭಾರತೀಯ ಹವಾಮಾನ ಇಲಾಖೆ -IMD ಎಚ್ಚರಿಕೆ ನೀಡಿದೆ. ಬೆಂಗಳೂರು ಸೇರಿದಂತೆ ಚಾಮರಾಜನಗರ, ಕೋಲಾರ ಹಾಗೂ ಇತರೆ ಕೆಲವು ಜಿಲ್ಲೆಗಳಲ್ಲಿ ಮಿಂಚು ಸಹಿತ ಮಳೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತನ್ನ ದೈನಂದಿನ ಬುಲೆಟಿನ್‌ನಲ್ಲಿ ತಿಳಿಸಿದೆ.







