ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ‘ಗಡಾಯಿಕಲ್ಲು’ ಚಾರಣಕ್ಕೆ ಜುಲೈ 8 ರಿಂದ ಜಾರಿಗೆ ಬರುವಂತೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಸಾರ್ವಜನಿಕರ ಹಾಗೂ ಚಾರಣಿಗರ ಪ್ರವೇಶಕ್ಕೆ ಕಡ್ಡಾಯ ನಿಬಂಧನೆ ವಿಧಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಈ ವರ್ಷ ಜೂನ್ 1 ರಂದು ಗಡಾಯಿಕಲ್ಲು ಚಾರಣಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಆದರೆ, ಆರಂಭಗೊಂಡ ಕೆಲವೇ ದಿನಗಳಲ್ಲಿ ಮಳೆಯ ಕಾರಣದಿಂದಾಗಿ ಮೊದಲ ಬಾರಿಗೆ ನಿಷೇಧ ಹೇರಲಾಗಿತ್ತು. ತದನಂತರ ಪರಿಸ್ಥಿತಿ ಸುಧಾರಿಸಿದ್ದನ್ನು ನೋಡಿ ಜೂನ್ 25 ರಂದು ಚಾರಣಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿರುವುದರಿಂದ, ಜುಲೈ 8 ರಿಂದ ಅನ್ವಯವಾಗುವಂತೆ ಮತ್ತೊಮ್ಮೆ ಟ್ರೆಕ್ಕಿಂಗ್‌ಗೆ ಬ್ರೇಕ್ ಹಾಕಲಾಗಿದೆ.







