ಸಮಗ್ರ ನ್ಯೂಸ್: ರಾಜ್ಯಾದ್ಯಂತ ಹೊಸ ವರ್ಷವನ್ನು ಸಂಭ್ರಮ, ಸಡಗರದಿಂದ ಸ್ವಾಗತಿಸಿದ್ದಾರೆ. ಆದರೆ ಈ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂದರ್ಭದಲ್ಲಿ ಗುಂಡು ತಗುಲಿ ಓರ್ವ ಯುವಕ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿ ನಡೆದಿದೆ.
ಶಿವಮೊಗ್ಗದ ಪಿಡ್ಲ್ಯೂಡಿ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದ ವಿನಯ್ ಮೃತ ದುರ್ದೈವಿ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕನ್ನಡ ಪಿಎಚ್ಡಿ ಮಾಡುತ್ತಿದ್ದ. ನಿನ್ನೆ ರಾತ್ರಿ ಮಂಜುನಾಥ್ ಒಲೇಕಾರ್ ಎಂಬುವವರ ಮನೆಯಲ್ಲಿ ನ್ಯೂ ಇಯರ್ ಪಾರ್ಟಿಗೆಂದು ಬಂದಿದ್ದ. ಈ ವೇಳೆ ಮಂಜುನಾಥ್ ಒಲೇಕಾರ್ ರಾತ್ರಿ 12ಕ್ಕೆ ನ್ಯೂ ಇಯರ್ ಸ್ವಾಗತಿಸಲು ಡಿಬಿಬಿಎಲ್ ಗನ್ನಿಂದ ಗುಂಡು ಹಾರಿಸಿದ್ದಾರೆ. ಆದರೆ ಆಕಸ್ಮಿಕವಾಗಿ ವಿನಯ್ಗೆ ಹೊಟ್ಟೆಗೆ ಗುಂಡು ತಗುಲಿದೆ. ಕೂಡಲೇ ಆತನನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ವಿನಯ್ ಮೃತಪಟ್ಟಿದ್ದಾನೆ.
ವಿನಯ್ಗೆ ಗುಂಡು ತಗಲುತ್ತಿದ್ದಂತೆ ಮಂಜುನಾಥ್ ಒಲೇಕಾರ್ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






