ಸಮಗ್ರ ನ್ಯೂಸ್: ಪೆಟ್ರೋಲ್‌ನಲ್ಲಿ ಕಡ್ಡಾಯವಾಗಿ ಶೇ. 20ರಷ್ಟು ಎಥನಾಲ್ (ಇ-20) ಮಿಶ್ರಣವನ್ನು ಬಳಸುವ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಈ ವಿವಾದವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಇಂಧನ ದಕ್ಷತೆ ಕುಸಿತ, ವಾಹನಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತಿರುವ ಆರೋಪಗಳ ನಡುವೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಯುತ್ತಿದೆ.ಕಳೆದ ವರ್ಷದಿಂದ ಜಾರಿಗೆ ಬಂದಿರುವ ಇ-20 ಇಂಧನ ನೀತಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರಾಜಕೀಯವಾಗಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶ್ವದ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿರುವ ಭಾರತದಲ್ಲಿ ವಾಹನ ಸವಾರರು ಈ ನೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ವಿವಾದ ಮತ್ತಷ್ಟು ತೀವ್ರಗೊಂಡಿದ್ದು, ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಇ-20 ಯೋಜನೆಯನ್ನು ಪ್ರಯೋಗ ಎಂದು ಉಲ್ಲೇಖಿಸಿದ್ದಾರೆಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ. ಈ ಹೇಳಿಕೆಯನ್ನು ಸರ್ಕಾರ ತಳ್ಳಿಹಾಕಿದ್ದರೂ, ನ್ಯಾಯಾಲಯದ ವಿಚಾರಣೆಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಆರ್. ವೆಂಕಟರಮಣಿ, ತಾವು ಪ್ರಯೋಗ ಎಂಬ ಪದವನ್ನು ಎಥನಾಲ್ ಲಭ್ಯತೆಯ ಪ್ರಮಾಣದ ಕುರಿತು ಬಳಸಿದ್ದು, ಎಥನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಉದ್ದೇಶಿಸಿ ಹೇಳಿಲ್ಲ ಎಂದು ಸುದ್ದಿಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ, ಸರ್ಕಾರದ ಸ್ಪಷ್ಟೀಕರಣ ಸಾರ್ವಜನಿಕರ ಆಕ್ರೋಶವನ್ನು ತಣಿಸುವಲ್ಲಿ ಯಶಸ್ವಿಯಾಗಿಲ್ಲ. ಸರ್ಕಾರ ಯಾವುದೇ ಸಮರ್ಪಕ ಸಿದ್ಧತೆ ಇಲ್ಲದೆ ಈ ನೀತಿಯನ್ನು ಜಾರಿಗೆ ತಂದಿದೆ ಎಂದು ವಿರೋಧಿಗಳು ಆರೋಪಿಸಿದ್ದಾರೆ.ಕೇಂದ್ರ ಸರ್ಕಾರದ ಪಿಐಬಿ ಈ ಆರೋಪಗಳನ್ನು ಆಧಾರರಹಿತ ಮತ್ತು ಅತಿರಂಜಿತ ಹೇಳಿಕೆಗಳು ಎಂದು ತಳ್ಳಿಹಾಕಿದ್ದು, ಜನರು ಪ್ರಚೋದನಾಕಾರಿ ಸುಳ್ಳು ಆರೋಪಕ್ಕೆ ಬಲಿಯಾಗಬಾರದು ಎಂದು ಮನವಿ ಮಾಡಿದೆ.
ನೂರಾರು ವಾಹನ ಸವಾರರು ಇ-20 ಇಂಧನ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗಿದೆ ಹಾಗೂ ಎಂಜಿನ್ ಮತ್ತು ಇತರೆ ಬಿಡಿಭಾಗಗಳಲ್ಲಿ ಹಾನಿ ಉಂಟಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳನ್ನು ಹಂಚಿಕೊಂಡಿದ್ದಾರೆ.








