ಸಮಗ್ರ ನ್ಯೂಸ್: ದೇಶದಲ್ಲಿ ವಿಧ್ವಂಸಕ ಕೃತ್ಯ ಹಾಗೂ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ ಗಂಭೀರ ಆರೋಪದಡಿ, ಬಿಹಾರ ಮೂಲದ ಯುವಕನೊಬ್ಬನನ್ನು ಚಿಕ್ಕಬಳ್ಳಾಪುರ ಪೊಲೀಸರು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಬಿಹಾರ ಮೂಲದ ಸಲಾಮಿನ್ (25) ಬಂಧಿತ ಆರೋಪಿಯಾಗಿದ್ದಾನೆ. ಭಯೋತ್ಪಾದನಾ ಪಿತೂರಿಗೆ ಸಂಬಂಧಿಸಿದಂತೆ ಈ ಹಿಂದೆ ಸೆರೆಸಿಕ್ಕಿದ್ದ ಶಬ್ಬೀರ್ ಎಂಬಾತ ನೀಡಿದ ಮಹತ್ವದ ಸುಳಿವಿನ ಮೇರೆಗೆ ಚಿಕ್ಕಬಳ್ಳಾಪುರ ಪೊಲೀಸರ ವಿಶೇಷ ತಂಡವು ಅರಕಲಗೂಡಿಗೆ ಧಾವಿಸಿ ಈತನನ್ನು ಹೆಡೆಮುರಿಕಟ್ಟಿದೆ.
ಮೂಲತಃ ಬಿಹಾರದವನಾದ ಸಲಾಮಿನ್, ಈ ಹಿಂದೆ ಹಾವೇರಿ ಜಿಲ್ಲೆಯಲ್ಲಿ ತನ್ನ ಸಹೋದರನೊಂದಿಗೆ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಗುತ್ತಿಗೆದಾರರು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಗೆ ತೆರಳುವಂತೆ ಸೂಚಿಸಿದ್ದರು. ಅದರಂತೆ ಬುಧವಾರವಷ್ಟೇ ಅರಕಲಗೂಡಿಗೆ ಬಂದಿದ್ದ ಸಲಾಮಿನ್, ರಸ್ತೆ ಕೆಲಸದಲ್ಲಿ ತೊಡಗಿಕೊಂಡಿದ್ದ.
ಪ್ರಕರಣದ ತನಿಖೆ ನಡೆಸುತ್ತಿದ್ದ ಚಿಕ್ಕಬಳ್ಳಾಪುರ ಪೊಲೀಸರಿಗೆ ಆರೋಪಿ ಅರಕಲಗೂಡಿನಲ್ಲಿರುವ ಬಗ್ಗೆ ಖಚಿತ ವರ್ತಮಾನ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಅರಕಲಗೂಡಿನ ಸಂತೇಮರೂರು ಸರ್ಕಲ್ ಬಳಿ ಸಲಾಮಿನ್‌ನನ್ನು ಸುತ್ತುವರಿದು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಆತನನ್ನು ಹೆಚ್ಚಿನ ವಿಚಾರಣೆ ಹಾಗೂ ತನಿಖೆಗಾಗಿ ಚಿಕ್ಕಬಳ್ಳಾಪುರಕ್ಕೆ ಕರೆದೊಯ್ದಿದ್ದಾರೆ.










