ಸಮಗ್ರ ನ್ಯೂಸ್: ಶಬರಿಮಲೆ ಶ್ರೀ ಅಯ್ಯಪ್ಪ ದೇಗುಲದ ಪ್ರಮುಖ ಪ್ರಸಾದವಾದ ‘ಅರವಣ ಪಾಯಸ’ದ ತೀವ್ರ ಕೊರತೆಯಿಂದಾಗಿ ಸರಕಾರ ಮತ್ತು ತಿರುವಿದಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಡುವೆ ಉಂಟಾಗಿದ್ದ ಬಿಕ್ಕಟ್ಟು ಈಗ ಕೇರಳಂ ಮುಖ್ಯಮಂತ್ರಿಗಳ ಹಸ್ತಕ್ಷೇಪದಿಂದ ಸೌಹಾರ್ದಯುತ ಅಂತ್ಯದತ್ತ ಸಾಗಿದೆ.
ಸನ್ನಿಧಾನದಲ್ಲಿ ಕನ್ಯಾಮಾಸದ ಪೂಜೆ ಅವಧಿಯಲ್ಲಿಅರವಣ ಪಾಯಸದ ತೀವ್ರ ಕೊರತೆ ಭಕ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಸ್ತುತ ಮುಖ್ಯಮಂತ್ರಿ ವಿ.ಡಿ.ಸತೀಶನ್ ಮಧ್ಯಪ್ರವೇಶಿಸಿ ಕೇರಳ ಸರಕಾರ ಮತ್ತು ಟಿಡಿಬಿ ನಡುವಿನ ಆಡಳಿತಾತ್ಮಕ ಸಂಘರ್ಷಕ್ಕೆ ಅಂತ್ಯ ಹಾಡಿದ್ದಾರೆ. ಮುಂಬರುವ ಮಂಡಲ- ಮಕರಜ್ಯೋತಿ ಯಾತ್ರೆಯನ್ನು ಸುಗಮವಾಗಿ ನಡೆಸಲು ಸರಕಾರ ಹಾಗೂ ದೇವಸ್ವಂ ಮಂಡಳಿ ಒಟ್ಟಾಗಿ ಕೆಲಸ ಮಾಡಲಿವೆ ಎಂದು ಮುಖ್ಯಮಂತ್ರಿ ಹಾಗೂ ಟಿಡಿಬಿ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ.
ಶಬರಿಮಲೆಯಲ್ಲಿ ಮುಂಬರುವ ಮಂಡಲ ಕಾಲದಲ್ಲಿ ಅರವಣ ಪ್ರಸಾದಕ್ಕೆ ಭಾರಿ ಬೇಡಿಕೆ ಇರಲಿದ್ದು, ದೈನಂದಿನ ಉತ್ಪಾದನಾ ಸಾಮರ್ಥ್ಯವನ್ನು 2.5 ಲಕ್ಷ ಟಿನ್ಗಳಿಂದ 3.5 ಲಕ್ಷ ಟಿನ್ಗಳಿಗೆ ಹೆಚ್ಚಿಸಲು 45 ದಿನಗಳ ನವೀಕರಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಾಸಿಕ ಪೂಜೆಯ ಅವಧಿಯಲ್ಲೇ ಪ್ಲಾಂಟ್ ಮುಚ್ಚಿ ನವೀಕರಣ ಆರಂಭಿಸಿದ್ದರಿಂದ ಸುಮಾರು 6 ಲಕ್ಷ ಯೂನಿಟ್ ಗುರಿಯ ಬದಲಾಗಿ ಕೇವಲ 3.2 ಲಕ್ಷ ಯೂನಿಟ್ ಮಾತ್ರ ಉತ್ಪಾದನೆಯಾಗಿದ್ದು, ಹಠಾತ್ ಕೊರತೆ ಎದುರಾಗಿತ್ತು.
ಕನ್ಯಾಮಾಸದ ಪೂಜೆ ಸಂದರ್ಭದಲ್ಲಿ ಅರವಣ ಪ್ಲಾಂಟ್ನ ನವೀಕರಣ ಕಾರ್ಯದಿಂದಾಗಿ ಅರವಣ ಪ್ರಸಾದದ ತೀವ್ರ ಕೊರತೆ ಎದುರಾಗಿತ್ತು. ಸಾವಿರಾರು ಅಯ್ಯಪ್ಪ ಭಕ್ತರು ಪ್ರಸಾದ ಸಿಗದೆ ಗಂಟೆಗಟ್ಟಲೆ ಕಾಯುವಂತಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ದೇವಸ್ವಂ ಮಂಡಳಿಯು ಒಬ್ಬ ಭಕ್ತನಿಗೆ ಕೇವಲ 1 ಟಿನ್ ಅರವಣ ಪ್ರಸಾದವನ್ನು ಮಾತ್ರ ಖರೀದಿಸಲು ಕಟ್ಟುನಿಟ್ಟಿನ ಮಿತಿ ಹೇರಿದ್ದರಿಂದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಆಡಳಿತಾತ್ಮಕ ಲೋಪದ ವಿರುದ್ಧ ಕೇರಳ ದೇವಸ್ವಂ ಸಚಿವ ಕೆ.ಮುರಳೀಧರನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.










