ಚುನಾವಣಾ ಮಾರುಕಟ್ಟೆಯಲ್ಲಿ ಬಿಜೆಪಿಯೇ ಶ್ರೀಮಂತ| ಕಾಂಗ್ರೆಸ್ ದೇಶಕ್ಕೆ ‌ಮಾಡಿದ ಖರ್ಚಿಗಿಂತ ಕಮಲ ಬಂಗಾಳಕ್ಕೆ ಮಾಡಿದ ಖರ್ಚು ಅಧಿಕ!!

ಸಮಗ್ರ ನ್ಯೂಸ್: ಚುನಾವಣಾ ರಾಜಕಾರಣದಲ್ಲಿ ಕೇವಲ ಸಿದ್ಧಾಂತ ಮತ್ತು ಭಾಷಣಗಳಷ್ಟೇ ಅಲ್ಲ, ಆರ್ಥಿಕ ಶಕ್ತಿಯೂ ಎಷ್ಟು ಪ್ರಬಲ ಪಾತ್ರ ವಹಿಸುತ್ತದೆ ಎನ್ನುವುದು ಈಗ ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ ಅಂಕಿ ಅಂಶಗಳಿಂದ ಸಾಬೀತಾಗಿದೆ. ಪಶ್ಚಿಮ ಬಂಗಾಳದ ಚುನಾವಣಾ ಸಮರದಲ್ಲಿ ಬಿಜೆಪಿ ಮಾಡಿರುವ ಖರ್ಚು ಭಾರತದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಐದು ರಾಜ್ಯಗಳಲ್ಲಿ ಮಾಡಿದ ಒಟ್ಟು ವೆಚ್ಚವನ್ನು ಮೀರಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

. Ad Widget . Ad Widget . Ad Widget

ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ ವರದಿಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಬರೋಬ್ಬರಿ 286.99 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ವಿಶೇಷವೆಂದರೆ, ಕಾಂಗ್ರೆಸ್ ಪಕ್ಷವು ಪಶ್ಚಿಮ ಬಂಗಾಳ ಸೇರಿದಂತೆ ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳಿಗೆ ಒಟ್ಟಾರೆಯಾಗಿ ಮಾಡಿರುವ ಖರ್ಚು ಕೇವಲ 248.55 ಕೋಟಿ ರೂಪಾಯಿಗಳು. ಅಂದರೆ ಕಾಂಗ್ರೆಸ್ ಪಕ್ಷವು ಐದು ರಾಜ್ಯಗಳಲ್ಲಿ ಮಾಡಿದ ಒಟ್ಟು ವೆಚ್ಚಕ್ಕಿಂತಲೂ ಬಿಜೆಪಿ ಒಂದು ರಾಜ್ಯಕ್ಕೆ ಮಾಡಿದ ಖರ್ಚು 38 ಕೋಟಿ ರೂಪಾಯಿಗಳಷ್ಟು ಅಧಿಕವಾಗಿದೆ.

. Ad Widget .

ಬಿಜೆಪಿಯು ಈ ಐದು ರಾಜ್ಯಗಳ ಚುನಾವಣೆಯಲ್ಲಿ ಒಟ್ಟು 529.38 ಕೋಟಿ ರೂಪಾಯಿಗಳನ್ನು ಸುರಿದಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಬಂಗಾಳಕ್ಕೇ ಮೀಸಲಿಟ್ಟಿತ್ತು. ಸಾಮಾನ್ಯ ಪ್ರಚಾರಕ್ಕಾಗಿ 217 ಕೋಟಿ ಹಾಗೂ ಅಭ್ಯರ್ಥಿಗಳಿಗಾಗಿ 69 ಕೋಟಿ ರೂಪಾಯಿಗಳನ್ನು ಬಿಜೆಪಿ ಖರ್ಚು ಮಾಡಿದೆ. ಈ ಭಾರಿ ಬಂಡವಾಳಕ್ಕೆ ತಕ್ಕಂತೆ ಬಿಜೆಪಿ ಅಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು, 207 ಸ್ಥಾನಗಳನ್ನು ಗೆದ್ದು ಮೊದಲ ಬಾರಿಗೆ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ ಮೂಲಕ ಹೀನಾಯ ಸೋಲು ಅನುಭವಿಸಿದೆ.

ದಕ್ಷಿಣದ ಕೇರಳ ರಾಜ್ಯದಲ್ಲಿ ಮಾತ್ರ ಚಿತ್ರಣ ಸ್ವಲ್ಪ ಭಿನ್ನವಾಗಿತ್ತು. ಇಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಹಣದ ಬಲದಲ್ಲೂ ಹಿಂದಿಕ್ಕಿದೆ. ಕೇರಳದಲ್ಲಿ ಬಿಜೆಪಿ 82.67 ಕೋಟಿ ರೂಪಾಯಿ ವೆಚ್ಚ ಮಾಡಿದರೆ, ಕಾಂಗ್ರೆಸ್ 105.34 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಚುನಾವಣಾ ಫಲಿತಾಂಶದಲ್ಲೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಇಲ್ಲಿ ಪ್ರಾಬಲ್ಯ ಮೆರೆದಿದೆ.

ಇವೆಲ್ಲಕ್ಕಿಂತ ಮುಖ್ಯವಾಗಿ, ಎರಡು ರಾಷ್ಟ್ರೀಯ ಪಕ್ಷಗಳ ಬ್ಯಾಂಕ್ ಬ್ಯಾಲೆನ್ಸ್ ನಡುವಿನ ಅಂತರ ಬೆಚ್ಚಿಬೀಳಿಸುವಂತಿದೆ. ಚುನಾವಣೆ ಮುಕ್ತಾಯದ ವೇಳೆಗೆ ಬಿಜೆಪಿಯ ಕೇಂದ್ರ ಕಚೇರಿಯಲ್ಲಿದ್ದ ನಿಧಿ 7,627.2 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ನಿಧಿಯು 169 ಕೋಟಿಯಿಂದ 103 ಕೋಟಿ ರೂಪಾಯಿಗೆ ಕುಸಿದಿದೆ. ಈ ಅಂಕಿ ಅಂಶಗಳು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಬಿಜೆಪಿ ಹೊಂದಿರುವ ಆರ್ಥಿಕ ಪ್ರಾಬಲ್ಯವನ್ನು ಎತ್ತಿ ತೋರಿಸುತ್ತಿವೆ. ವಿರೋಧ ಪಕ್ಷಗಳು ಪ್ರಚಾರದ ಅಖಾಡಕ್ಕಿಳಿಯುವ ಮುನ್ನವೇ ಆರ್ಥಿಕವಾಗಿ ಹೈರಾಣಾಗುತ್ತಿರುವುದು ಈ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತಿದೆ.

Leave a Comment

Your email address will not be published. Required fields are marked *