ಸಮಗ್ರ ನ್ಯೂಸ್: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಈಗ ಅಂತಿಮ ಹಾಗೂ ಅತ್ಯಂತ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಪ್ರಕ್ರಿಯೆಯ ಅಂತ್ಯಕ್ಕೆ ಸುಮಾರು 86.64 ಲಕ್ಷ (ಶೇ.15.63) ಮತದಾರರ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗುವ ಭೀತಿ ಎದುರಾಗಿದೆ.
ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ‘ಬಿಎಲ್‌ಒ’ಗಳು ನಡೆಸಿದ ಮನೆ-ಮನೆ ಸಮೀಕ್ಷೆಯಲ್ಲಿ ಇಷ್ಟೊಂದು ಬೃಹತ್ ಸಂಖ್ಯೆಯ ‘ಎಎಸ್‌ಡಿಡಿಒ’ (ಅನುಮಾನಾಸ್ಪದ/ಸ್ಥಳಾಂತರಗೊಂಡ/ಮೃತ/ದ್ವಿಪ್ರತಿ) ಮತದಾರರು ಪತ್ತೆಯಾಗಿದ್ದಾರೆ. ಜೂನ್ 30ರಿಂದ ಆರಂಭಗೊಂಡಿದ್ದ ಈ ಬೃಹತ್ ಪರಿಷ್ಕರಣೆ ಪ್ರಕ್ರಿಯೆಯು ಆಗಸ್ಟ್ 8ಕ್ಕೆ ಮುಕ್ತಾಯಗೊಳ್ಳಲಿದ್ದು, ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ.
ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ಮತದಾರರ ಪೈಕಿ 59,050 ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಡೆಸಿದ ಪರಿಶೀಲನೆಯಲ್ಲಿ 86,64,501 ಮತದಾರರನ್ನು ‘ಎಎಸ್‌ಡಿಡಿಒ’ ಎಂದು ವರ್ಗೀಕರಿಸಲಾಗಿದೆ. ಈ ಪೈಕಿ ಮೃತಪಟ್ಟವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರಿರುವ ಸುಮಾರು 20 ಲಕ್ಷ ಮತದಾರರ ಹೆಸರು ಶಾಶ್ವತವಾಗಿ ಡಿಲೀಟ್ ಆಗಲಿದೆ. ಉಳಿದ 66 ಲಕ್ಷ ಮತದಾರರು ಮರುಸೇರ್ಪಡೆಗೆ ಜಾಗ್ರತೆ ವಹಿಸಬೇಕಿದೆ.








