ಸಮಗ್ರ ನ್ಯೂಸ್: ಪತಿ ಮತ್ತು ಅತ್ತೆಯ ಕಣ್ಣೆದುರಲ್ಲೇ ನವ ವಿವಾಹಿತೆಯೊಬ್ಬರು ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಇಲ್ಲಿನ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣಲಂನಲ್ಲಿ ನಡೆದಿದೆ. ಚಿನ್ನದ ಆಭರಣಗಳಿಗಾಗಿ ಪತಿಯ ಕುಟುಂಬದವರು ನೀಡುತ್ತಿದ್ದ ಸರಣಿ ಕಿರುಕುಳವೇ ಈ ದುರಂತಕ್ಕೆ ಕಾರಣ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ.
ಮೂಲತಃ ಬದಿಯಡ್ಕದ ಚೆರ್ಲಡುಕ್ಕಂ ನಿವಾಸಿಯಾದ ಫಾತಿಮತ್ ಸುಫೈದಾ (24) ಮೃತ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಆದಿಲ್‌ನನ್ನು ವಿದ್ಯಾನಗರ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಚೆಂಗಲ ಪಂಚಾಯತ್‌ನ ಪಾಣಲಂನಲ್ಲಿರುವ ಆದಿಲ್ ಅವರ ಮನೆಯಲ್ಲಿ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದೆ. ಪತಿ ಮತ್ತು ಅತ್ತೆಯ ಕಿರುಕುಳ ಅತಿಯಾದಾಗ ಮನನೊಂದ ಸುಫೈದಾ, ಅವರಿಬ್ಬರ ಮುಂದೆಯೇ ಆಸಿಡ್ ಸೇವಿಸಿದ್ದಾರೆ.
ತಕ್ಷಣವೇ ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯರಾತ್ರಿ 12.30 ರ ಸುಮಾರಿಗೆ ಆಕೆ ಕೊನೆಯುಸಿರೆಳೆದಿದ್ದಾರೆ. ಮೃತಳ ಸಹೋದರ ಎಂ.ಕೆ. ಅಬ್ದುಲ್ ವಾಸಿಲ್ ಎ.ಕೆ. ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಫಾತಿಮತ್ ಸುಫೈದಾ ಮತ್ತು ಆದಿಲ್ ಪರಸ್ಪರ ಪ್ರೀತಿಸಿ ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದರು.
ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಸುಫೈದಾ ಧರಿಸಿದ್ದ ಚಿನ್ನದ ಆಭರಣಗಳಿಗಾಗಿ ಪತಿ ಮತ್ತು ಅತ್ತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದರು. ನಿರಂತರ ನಿಂದನೆ ಹಾಗೂ ದೌರ್ಜನ್ಯದಿಂದ ಬೇಸತ್ತೇ ಆಕೆ ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಸುಫೈದಾ ಅವರ ಸಾವಿನ ಸುತ್ತ ಹಲವು ಅನುಮಾನಗಳಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಆಕೆಯ ಸಂಬಂಧಿಕರು ಒತ್ತಾಯಿಸಿದ್ದಾರೆ.







