ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮಹಾತಿರುವು| ಮರು ತನಿಖೆ ನಿರ್ಧಾರ ಸಿಬಿಐ ವಿವೇಚನೆಗೆ ಬಿಟ್ಟ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ಧರ್ಮಸ್ಥಳದ ಉಜಿರೆಯ SDM ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ಹಳೆಯ ಪ್ರಕರಣದ ಮರು ತನಿಖೆ ಕುರಿತು ಕೇಂದ್ರ ತನಿಖಾ ಸಂಸ್ಥೆ ಅಥವಾ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿದೆ.

Ad Widget ... ..

ಮುಂದಿನ ವಾರ ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದ್ದು, ಅಷ್ಟರೊಳಗೆ ಸರ್ಕಾರ ತನ್ನ ಈ ನಿಲುವನ್ನು ಅಧಿಕೃತವಾಗಿ ಸ್ಪಷ್ಟಪಡಿಸಲಿದೆ ಎಂದು ಗೃಹ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಈಗಾಗಲೇ ರಾಜ್ಯ ಗೃಹ ಹಾಗೂ ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸರ್ಕಾರ ಮಹತ್ವದ ಸಮಾಲೋಚನೆ ನಡೆಸಿದೆ. ಸುಮಾರು 13 ವರ್ಷಗಳ ಹಿಂದೆಯೇ ಈ ಕೊಲೆ ಪ್ರಕರಣದ ಸಂಪೂರ್ಣ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದ್ದು, ವೈದ್ಯಕೀಯ ವರದಿಗಳು ಸೇರಿದಂತೆ ಎಲ್ಲಾ ಪ್ರಮುಖ ದಾಖಲೆಗಳನ್ನು ಕೇಂದ್ರ ಸಂಸ್ಥೆಗೆ ಹಸ್ತಾಂತರಿಸಲಾಗಿದೆ.

Ad Widget

ಆದ್ದರಿಂದ, ಈಗ ಮತ್ತೆ ಮರು ತನಿಖೆ ನಡೆಸಬೇಕೇ ಬೇಡವೇ ಎಂಬ ನಿರ್ಣಯವನ್ನು ಸಿಬಿಐ ಅಥವಾ ಕೇಂದ್ರ ಸರ್ಕಾರವೇ ಕೈಗೊಳ್ಳುವುದು ಸೂಕ್ತ ಎಂಬುದು ರಾಜ್ಯ ಸರ್ಕಾರದ ಅಭಿಪ್ರಾಯವಾಗಿದೆ. ಸ್ಥಳೀಯ ಪೊಲೀಸರು ಹಾಗೂ ಸಿಐಡಿ ತನಿಖೆಯ ಬಳಿಕ ಪ್ರಕರಣ ಸಿಬಿಐ ಕೈ ಸೇರಿರುವುದರಿಂದ, ಈಗ ಮತ್ತೆ ರಾಜ್ಯದ ತನಿಖಾ ಸಂಸ್ಥೆಗಳಿಗೆ ಇದನ್ನು ಒಪ್ಪಿಸಲು ತಾಂತ್ರಿಕ ತೊಂದರೆಗಳು ಎದುರಾಗಲಿವೆ ಎಂದು ಸರ್ಕಾರ ಭಾವಿಸಿದೆ.

ಈ ಇಡೀ ಕಾನೂನು ಹೋರಾಟ ಮತ್ತೆ ಮುಂಚೂಣಿಗೆ ಬರಲು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ ಅರ್ಜಿಗಳೇ ಕಾರಣ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸಿಬಿಐ ವಿಶೇಷ ನ್ಯಾಯಾಲಯವು ಈ ಹಿಂದೆಯೇ ಆರೋಪಿ ಸಂತೋಷ್ ರಾವ್‌ನನ್ನು ದೋಷಮುುಕ್ತಗೊಳಿಸಿ ಬಿಡುಗಡೆ ಮಾಡಿತ್ತು. ಈ ತೀರ್ಪಿನ ನಂತರ, ತನ್ನ ಮಗಳ ಕೊಲೆ ಪ್ರಕರಣದ ಮರು ತನಿಖೆಯಾಗಬೇಕು ಎಂದು ಆಗ್ರಹಿಸಿ ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೇ ವೇಳೆ, ಕೆಳಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಗಳನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಮರು ತನಿಖೆಯ ಸಾಧ್ಯತೆಗಳ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಸರ್ಕಾರ ಈಗ ತನ್ನ ನಿಲುವನ್ನು ಸಿದ್ಧಪಡಿಸಿಕೊಂಡಿದೆ.

2012ರಲ್ಲಿ ಧರ್ಮಸ್ಥಳದ ಉಜಿರೆಯಲ್ಲಿ ನಡೆದ ಈ ಅಮಾನುಷ ಕೃತ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು ಮತ್ತು ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ಮೂಡಿಸಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದರೂ, ಜನರ ಒತ್ತಾಯದ ಮೇರೆಗೆ ಅಂದಿನ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಆ ಸಂದರ್ಭದಲ್ಲಿ ಕಾರ್ಕಳದ ಸಂತೋಷ್ ರಾವ್‌ನನ್ನು ಬಂಧಿಸಲಾಗಿತ್ತು. ತದನಂತರ 2013ರಲ್ಲಿ ಬಂದ ಕಾಂಗ್ರೆಸ್ ಸರ್ಕಾರ ತನಿಖೆಯನ್ನು ಸಂಪೂರ್ಣವಾಗಿ ಸಿಬಿಐಗೆ ಹಸ್ತಾಂತರಿಸಿತ್ತು. ಆದರೆ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯವು ಆರೋಪಿಯನ್ನು ಬಿಡುಗಡೆ ಮಾಡಿದಾಗಿನಿಂದ, ಸೌಜನ್ಯಳಿಗೆ ನಿಜವಾದ ನ್ಯಾಯ ಸಿಗಬೇಕು ಮತ್ತು ಮರು ತನಿಖೆಯಾಗಬೇಕು ಎಂಬ ದನಿ ಜನಸಾಮಾನ್ಯರಲ್ಲಿ ಮತ್ತಷ್ಟು ತೀವ್ರವಾಗಿ ಕೇಳಿಬರುತ್ತಿದೆ.
(ಕೃಪೆ:ನವಸಮಾಜ.ಕಾಂ)

Leave a Comment

Your email address will not be published. Required fields are marked *