ಸಮಗ್ರ ನ್ಯೂಸ್: ಯಕ್ಷಗಾನ ಕಲಾವಿದರನ್ನು ಅವಾಚ್ಯವಾಗಿ ನಿಂದಿಸಿ ಬೆದರಿಕೆ ಒಡ್ಡಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಾಖಲಾದ ಪ್ರಕರಣದಲ್ಲಿ, ನಿರೀಕ್ಷಣಾ ಜಾಮೀನು ನೀಡಲು ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ನಿರಾಕರಿಸಿದೆ.
ಯಕ್ಷಗಾನ ಕಲಾವಿದರೊಬ್ಬರ 71 ವರ್ಷದ ತಾಯಿಯು ಮಹೇಶ್ ಶೆಟ್ಟಿ ವಿರುದ್ಧ ಪುತ್ತೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಮಹಿಳೆ ಪೊಲೀಸ್ ಠಾಣೆಗೆ 2026ರ ಏ. 13ರಂದು ದೂರು ನೀಡಿದ್ದರು.
‘ಖಾಸಗಿ ವಾಹಿನಿಯೊಂದರಲ್ಲಿ 2025ರ ನವೆಂಬರ್ ನಲ್ಲಿ ಪ್ರಸಾರವಾಗಿದ್ದ ‘ಯಕ್ಷ ತೆಲಿಕೆ’ ಹಾಸ್ಯಮಯ ಕಾರ್ಯಕ್ರಮದ ‘ಬುರುಡೆ ಗ್ಯಾಂಗ್’ ಕಂತಿನ ಕುರಿತು ನನ್ನ ಮಗ ಪ್ರಜ್ವಲ್ ಜತೆ ಮಹೇಶ್ ಶೆಟ್ಟಿ ತಿಮರೋಡಿ ಮೊಬೈಲ್‌ನಲ್ಲಿ ಮಾತನಾಡಿದ್ದರು. ಆ ಕಾರ್ಯಕ್ರಮದ ಶೀರ್ಷಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅವರು, ನನ್ನ ಚಾರಿತ್ರ್ಯದ ಬಗ್ಗೆ ಅವಹೇಳನಕಾರಿ ಪದ ಬಳಸಿದ್ದರು. ಈ ಸಂಭಾಷಣೆಯ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು’ ಎಂದು ಮಹಿಳೆ ಆರೋಪಿಸಿದ್ದರು.
ಮಹೇಶ್ ಶೆಟ್ಟಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196 (1) (ಜನಾಂಗ/ ಧರ್ಮ/ಗುಂಪುಗಳ ನಡುವೆ ದ್ವೇಷ ಹರಡುವಿಕೆ), ಸೆಕ್ಷನ್ 351 (ಕ್ರಿಮಿನಲ್ ಬೆದರಿಕೆ), 352 (ಶಾಂತಿ ಭಂಗವನ್ನುಂಟುಮಾಡಲು ಉದ್ದೇಶಪೂರ್ವಕ ಅವಹೇಳನ) ಹಾಗೂ ಸೆಕ್ಷನ್ 79 (ಮಹಿಳೆಯನ್ನು ಅಪಮಾನಗೊಳಿಸುವ ಉದ್ದೇಶದಿಂದ ಕೂಡಿದ ಪದ, ಸಂಜ್ಞೆ ಬಳಕೆ) ಅಡಿ ಪ್ರಕರಣ ದಾಖಲಾಗಿತ್ತು.
ಮಹೇಶ್ ಶೆಟ್ಟಿ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 482ರ ಅಡಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪ ಸಲ್ಲಿಸಿದ್ದ ಪ್ರಾಸಿಕ್ಯೂಷನ್, ‘ಮಹೇಶ್ ಶೆಟ್ಟಿ ವಿರುದ್ಧ 31 ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. 1992ರಲ್ಲಿ ವ್ಯಕ್ತಿಯೊಬ್ಬರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣವೂ ಅವುಗಳಲ್ಲಿ ಸೇರಿದೆ ಎಂದು ಪ್ರಾಸಿಕ್ಯೂಷನ್ ಪದ ವಕೀಲರು ವಾದಿಸಿದ್ದರು. ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಮಟೆ ಅವರು ತಿಮರೋಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬುಧವಾರ ತಿರಸ್ಕರಿಸಿದರು.
ಮತ್ತೊಂದು ನಿರೀಕ್ಷಣಾ ಜಾಮೀನು ಅರ್ಜಿ: ಮಹೇಶ್ ಶೆಟ್ಟಿ ತಿಮರೋಡಿ ಅವರು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಇನ್ನೊಂದು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪುತ್ತೂರಿನಲ್ಲಿರುವ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.







