ಸಮಗ್ರ ನ್ಯೂಸ್: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ದೇಶದ ಅತಿದೊಡ್ಡ ಉದ್ಯೋಗ ಮೇಳ ಆಗಸ್ಟ್ 7ರಂದು ಬೆಳಿಗ್ಗೆ 9.30ಕ್ಕೆ ವಿದ್ಯಾಗಿರಿಯ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಂಸದ ಸದಸ್ಯ ಬ್ರಿಜೇಶ್ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಉಪಸ್ಥಿತರಿರಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಳ್ವಾಸ್ ಉದ್ಯೋಗ ಮೇಳದ ಆರಂಭಿಕ ಹಂತದಲ್ಲಿ ಯೋಜನೆ, ಸಂಘಟನೆ ಹಾಗೂ ಯಶಸ್ವಿ ಅನುಷ್ಠಾನಕ್ಕೆ ಸಂಪೂರ್ಣ ಸಹಕಾರ ನೀಡಿ ಮಹತ್ವದ ಕೊಡುಗೆ ನೀಡಿದ್ದ ಇತ್ತೀಚೆಗೆ ನಿಧನರಾದ ಎ.ಕೆ. ಮಹೇಶ್ ಶೇಖ ಅವರ ಸ್ಮರಣಾರ್ಥ ಆಳ್ವಾಸ್ ಪ್ರಗತಿಯ ಉದ್ಘಾಟನಾ ವೇದಿಕೆಯನ್ನು ಗೌರವಪೂರ್ವಕವಾಗಿ ಸಮರ್ಪಿಸಲಾಗುತ್ತಿದೆ ಎಂದರು.
ಬೆಳ್ತಂಗಡಿಯ ಶ್ರೀಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜನಾರ್ದನ, ಎಂಆರ್‌ಜಿ ಗ್ರೂಪ್‌ನ ಸಂಸ್ಥಾಪಕ ಡಾ.ಕೆ.ಪ್ರಕಾಶ್ ಶೆಟ್ಟಿ, ಭವಾನಿ ಗ್ರೂಪ್‌ನ ಸಂಸ್ಥಾಪಕ ಕುಸುಮೋದರ ಡಿ. ಶೆಟ್ಟಿ, ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ ಹಾಗೂ ಎಕ್ಸ್‌ಪರ್ಟೀಸ್ ಕಾಂಟ್ರಾಕ್ಟಿಂಗ್ ಕಂಪನಿಯ ಸಹ-ಸಂಸ್ಥಾಪಕ ಮಹಮ್ಮದ್ ಅಶ್ಪಾಕ್ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಈ ಬಾರಿಯ ಉದ್ಯೋಗ ಮೇಳದಲ್ಲಿ ದೇಶ ವಿದೇಶಗಳ 350ಕ್ಕೂ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿದ್ದು, ಐಟಿ, ಐಟಿಇಎಸ್, ಉತ್ಪಾದನೆ, ಬ್ಯಾಂಕಿಂಗ್, ಆರೋಗ್ಯ, ಔಷಧ, ಆತಿಥ್ಯ, ಚಿಲ್ಲರೆ ವ್ಯಾಪಾರ, ಮಾಧ್ಯಮ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 26,300ಕ್ಕೂ ಅಧಿಕ ಉದ್ಯೋಗಾವಕಾಶಗಳು ಲಭ್ಯವಿರಲಿವೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಹಾಗೂ ಅನುಭವ ಹೊಂದಿದ ಅಭ್ಯರ್ಥಿಗಳು ತಮ್ಮ ಅರ್ಹತೆಗೆ ತಕ್ಕ ಉದ್ಯೋಗಗಳನ್ನು ಪಡೆಯಲು ಇದು ಅತ್ಯುತ್ತಮ ವೇದಿಕೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.96117 50531, 97414 40490 ಸಂಪರ್ಕಿಸಬಹುದು ಎಂದು ಹೇಳಿದರು.








