ಸಮಗ್ರ ನ್ಯೂಸ್: ಬಿಹಾರ ರಾಜಕೀಯದಲ್ಲಿ ಮಂಗಳವಾರ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದ್ದು, ಸುಮಾರು ಎರಡು ದಶಕಗಳ ಕಾಲ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ಅವರ ರಾಜೀನಾಮೆ ಬೆನ್ನಲ್ಲೇ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಖಂಡ ಹಾಗೂ ಹಾಲಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಬಿಹಾರ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಂಪೂರ್ಣ ಸಜ್ಜಾಗಿದ್ದಾರೆ. ವಿಶೇಷವೆಂದರೆ, ಬಿಹಾರದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನಾಯಕರೊಬ್ಬರು ಮುಖ್ಯಮಂತ್ರಿ ಗದ್ದುಗೆ ಏರುತ್ತಿದ್ದಾರೆ.
ಸಾಮ್ರಾಟ್ ಚೌಧರಿ ಅವರು ನವೆಂಬರ್ 16, 1968 ರಂದು ಮುಂಗೇರ್ ಜಿಲ್ಲೆಯ ಲಖನ್‌ಪುರ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಶಕುನಿ ಚೌಧರಿ ಏಳು ಬಾರಿ ಶಾಸಕ ಮತ್ತು ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಸಾಮ್ರಾಟ್ ಬಾಲ್ಯದಿಂದಲೇ ರಾಜಕೀಯವನ್ನು ನೋಡಿಕೊಂಡು ಬೆಳೆದವರು. ಅವರ ತಾಯಿ ಪಾರ್ವತಿ ದೇವಿ ಕೂಡ ತಾರಾಪುರದಿಂದ ಶಾಸಕಿಯಾಗಿ ಸೇವೆ ಸಲ್ಲಿಸಿದ್ದರು.
ಬುಧವಾರ ನೂತನ ಸಿಎಂ ಪ್ರಮಾಣವಚನ ಸ್ವೀಕಾರ ಕಾರ‍್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.







