ಸಮಗ್ರ ನ್ಯೂಸ್: ನಾಯಕ ಇಶಾನ್ ಕಿಶನ್ (91;44ಎ) ಅವರ ಮಿಂಚಿನ ಬ್ಯಾಟಿಂಗ್ ಬಳಿಕ ಮಧ್ಯಮ ವೇಗಿಗಳಾದ ಪ್ರಫುಲ್ ಹಿಂಗೆ ಮತ್ತು ಸಾಕಿಬ್ ಹುಸೇನ್ ಅವರು ಐಪಿಎಲ್ ಪದಾರ್ಪಣೆ ಪಂದ್ಯವನ್ನು ಸ್ಮರಣೀಯ ವಾಗಿಸಿಕೊಂಡರು. ಈ ಮೂವರ ಆಟದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಗೆಲುವಿನ ಹಳಿಗೆ ಮರಳಿತು.
ರಾಜೀವಗಾಂಧಿ ಕ್ರೀಡಾಂಗಣದಲ್ಲಿಸೋಮವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 57 ರನ್‌ಗಳ ಸುಲಭ ಗೆಲುವು ದಾಖಲಿಸಿತು. ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ರಿಯಾನ್ ಪರಾಗ್ ಪಡೆ ಹಾಲಿ ಆವೃತ್ತಿಯಲ್ಲಿ ಮೊದಲ ಸೋಲು ಅನುಭವಿಸಿತು. ಆದರೂ, ಅಗ್ರಸ್ಥಾನ ಅಬಾಧಿತವಾಗಿದೆ.
ಟಾಸ್ ಗೆದ್ದ ರಾಜಸ್ಥಾನ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಇಶಾನ್ ಮತ್ತು ಹೆನ್ರಿಚ್ ಕ್ಲಾಸೆನ್ (40) ಬ್ಯಾಟಿಂಗ್ ಬಲದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು 6 ವಿಕೆಟ್‌ಗೆ 216 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು. ಸವಾಲಿನ ಗುರಿ ಪಡೆದ ರಾಜಸ್ಥಾನ ತಂಡವು ಹೊಸಮುಖಗಳಾದ ಪ್ರಫುಲ್ (4-0-34-4) ಮತ್ತು ಸಾಕಿಬ್ (4-0-24-4) ಅಮೋಘ ದಾಳಿಗೆ ಅಕ್ಷರಶಃ ತತ್ತರಿಸಿತು. ಇದರಿಂದಾಗಿ 19 ಓವರ್‌ಗಳಲ್ಲಿ 159 ರನ್ ಗಳಿಸಿ ಹೋರಾಟ ಮುಗಿಸಿತು.
ಆಕ್ರಮಣಕಾರಿ ಆಟಗಾರ ಅಭಿಷೇಕ್ ಶರ್ಮಾ ಅವರು ಜೋಫ್ರಾ ಆರ್ಚರ್ ಮಾಡಿದ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಔಟಾದರು. ಕಿಶನ್ ಬಂದ ಹಾಗೆ ಬೀಸಾಟ ನಡೆಸಿದರು. ಕ್ರೀಸ್‌ನಲ್ಲಿದ್ದಷ್ಟೂ ಸಮಯ ಇಶಾನ್ ಅತ್ಯುತ್ತಮ ಲಯದಲ್ಲಿದ್ದಂತೆ ಕಂಡಿದ್ದು, ಎಂಟು ಬೌಂಡರಿಗಳ ಜೊತೆ ಆರು ಸಿಕ್ಸರ್‌ಗಳನ್ನು ಎತ್ತಿದರು. ಹೆನ್ರಿಚ್ ಜೊತೆ ಮೂರನೇ ವಿಕೆಟ್‌ಗೆ ಅವರು ಕೇವಲ 39 ಎಸೆತಗಳಲ್ಲಿ 88 ರನ್‌ಗಳ ಜೊತೆಯಾಟ ವಾಡಿದರು. ಕಿಶನ್ ಶತಕ ಸಮೀಪಿಸು ತ್ತಿರುವಾಗಲೇ ಸಂದೀಪ್ ಶರ್ಮಾ ಬೌಲಿಂಗ್‌ನಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಬೌಲರ್‌ಗೇ ಕ್ಯಾಚ್ ನೀಡಿದರು.
ಲಯದಲ್ಲಿರುವ ನಿತೀಶ್ (28, 13 ಎಸೆತ) ಮತ್ತು ಸಲೀಲ್ (ಔಟಾಗದೇ 24, 13 ಎಸೆತ) ಅವರ ಆಟದಿಂದ ತಂಡದ ಮೊತ್ತ 200ರ ಗಡಿ ದಾಟಿತು.






