ಸಮಗ್ರ ನ್ಯೂಸ್: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು(ಫೆ.7) ಬೆಳಿಗ್ಗೆ ಸಂಭವಿಸಿದೆ.
ಸುಳ್ಯ ಕೆವಿಜಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಪುತ್ತೂರು ತಾಲೂಕಿನ ತಿಂಗಳಾಡಿಯ ವಸಂತ ಎಂಬವರು ಚಿಕಿತ್ಸೆಗಾಗಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಆರು ಗಂಟೆ ಸುಮಾರಿಗೆ ಆಸ್ಪತ್ರೆಯ ಕಟ್ಟಡದ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೂಲಿಕಾರರಾಗಿದ್ದ ಇವರು ಪಿಟ್ಸ್ ಕಾಯಿಲೆಗೆ ಒಳಗಾಗಿದ್ದರು. ಇದಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಮೃತರು ಪತ್ನಿ ಗೀತಾ, ಪುತ್ರ ನಾಗೇಶ್, ಪುತ್ರಿಯರಾದ ನಳಿನಿ ಹಾಗೂ ನಯನರವರನ್ನು ಅಗಲಿದ್ದಾರೆ. ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದೆ.

















