ಸಮಗ್ರ ನ್ಯೂಸ್: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ ನಿಗದಿಪಡಿಸಲಾಗಿದ್ದ ದಿನಾಂಕದ ಬದಲಾಗಿ, ಅಕ್ಟೋಬರ್ 26ರ ಸೋಮವಾರದಂದು ವಾಲ್ಮೀಕಿ ಜಯಂತಿ ಆಚರಿಸಲು ಹಾಗೂ ಅಂದು ಸಾರ್ವತ್ರಿಕ ರಜೆ ನೀಡಿ ಸರ್ಕಾರ ಆದೇಶಿಸಿದೆ.
ಶೀಗಿ ಹುಣ್ಣಿಮೆಯಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆಗೆ ಸರ್ಕಾರ ಆದೇಶಿಸಿದೆ. ಹೀಗಾಗಿ ಸಾರ್ವತ್ರಿಕ ರಜೆಯನ್ನು 2026ರ ಅಕ್ಟೋಬರ್ 25ರ ಭಾನುವಾರದ ಬದಲು ಅಕ್ಟೋಬರ್ 26ರ ಸೋಮವಾರಕ್ಕೆ ಬದಲಾಯಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ರವಿಕುಮಾರ್ ಎಸ್ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಹಿಂದಿನ ಅಧಿಸೂಚನೆಯನ್ವಯ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು 2026ರ ಅಕ್ಟೋಬರ್ 25ರ ಭಾನುವಾರದಂದು ಘೋಷಿಸಲಾಗಿತ್ತು. ಆದರೆ, ವಾಲ್ಮೀಕಿ ಜಯಂತಿಯನ್ನು ‘ಶೀಗಿ ಹುಣ್ಣಿಮೆ’ ದಿನದಂದೇ ಆಚರಿಸುವ ಸಂಪ್ರದಾಯವಿರುವುದರಿಂದ, ಅಕ್ಟೋಬರ್ 26ರ ಸೋಮವಾರದಂದು ಶೀಗಿ ಹುಣ್ಣಿಮೆ ಬಂದ ಹಿನ್ನೆಲೆಯಲ್ಲಿ ಅಂದೇ ಜಯಂತಿಯನ್ನು ಆಚರಿಸಲು ಮತ್ತು ಸಾರ್ವತ್ರಿಕ ರಜೆ ನೀಡಲು ಆದೇಶಿಸಲಾಗಿದೆ. ಈ ರಜೆ ಬ್ಯಾಂಕ್ಗಳಿಗೂ ಅನ್ವಯಿಸಲಿದೆ. ಪರಿಣಾಮವಾಗಿ ಅಕ್ಟೋಬರ್ 24ರ ನಾಲ್ಕನೇ ಶನಿವಾರ, ಭಾನುವಾರ ಮತ್ತು ಸೋಮವಾರ ಸೇರಿ ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರಿಗೆ ಸತತ 3 ದಿನಗಳ ಸರಣಿ ರಜೆ (ಲಾಂಗ್ ವೀಕೆಂಡ್) ದೊರೆಯಲಿದೆ.









