ಸಮಗ್ರ ನ್ಯೂಸ್: ಸಮಸ್ಯೆ ಹೇಳಲು ಬಂದ ಮಹಿಳೆಗೆ ವಸತಿ ಸಚಿವ ಸೋಮಣ್ಣ ಕಪಾಳಮೋಕ್ಷ ಮಾಡಿರೋ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ.
ಹಂಗಳ ಗ್ರಾಮದಲ್ಲಿ ನಿನ್ನೆ 175 ಗ್ರಾಮಸ್ಥರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಿಗದಿಯಾಗಿತ್ತು. ಮಧ್ಯಾಹ್ನ 3.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸಂಜೆ 6.30ಕ್ಕೆ ಆಗಮಿಸಿದ್ದ ಸಚಿವರ ಬಳಿ ಮಹಿಳೆ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದರು. ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಸಂಭವಿಸಿತ್ತು. ಇದೇ ವೇಳೆ ಮಹಿಳೆ ಸಚಿವರ ಬಳಿ ತೆರಳಿದ್ದ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಸಚಿವರು, ಮಹಿಳೆಯ ಕಪಾಳಕ್ಕೆ ಬಾರಿಸಿದ್ದಾರೆ.
ಘಟನೆಯಿಂದ ವೇದಿಕೆ ಮೇಲೆ ಕೆಲಕಾಲ ಗೊಂದಲದ ವಾತಾವರಣ ಏರ್ಪಟ್ಟಿತ್ತು. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು, ಪರಿಸ್ಥಿತಿ ತಿಳಿಗೊಳಿಸಿದ್ದರು. ಕಪಾಳಮೋಕ್ಷಕ್ಕೆ ಒಳಗಾಗಿದ್ದ ಮಹಿಳೆ ಕಳೆದ 5 ವರ್ಷದ ಹಿಂದೆಯೇ ನಿವೇಶನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು ಎನ್ನಲಾಗಿದೆ. ಆದರೆ ಆಕೆಗೆ ಹಕ್ಕು ಪತ್ರ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಳು. ಇದಕ್ಕೆ ನೇರ ಸಚಿವರ ಬಳಿ ಸಮಸ್ಯೆ ಹೇಳಿಕೊಳ್ಳಲು ಮುಂದಾಗಿದ್ದರು ಎನ್ನಲಾಗಿದೆ.
ಕಪಾಳಮೋಕ್ಷಕ್ಕೆ ಒಳಗಾಗಿದ್ದ ಮಹಿಳೆ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿದ್ದಳು. ಇದು ವಿಡಿಯೋದಲ್ಲಿ ವೈರಲ್ ಆಗಿದ್ದು, ಕಾಲಿಗೆ ನಮಸ್ಕರಿಸಲು ಬಂದ ಮಹಿಳೆಯ ವರ್ತನೆಯಿಂದ ಅಸಮಾಧಾನಗೊಂಡಿದ್ದ ಸಚಿವರು, ಕೆನ್ನೆಗೆ ಬಾರಿಸಿರೋದು ಕಾಣಬಹುದಾಗಿದೆ. ಇದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಗೂ ತಡವಾಗಿ ಬಂದಿದ್ದ ಸಚಿವರು, ಮುಜುಗರ ಅನುಭವಿಸಿದ್ದರು. ಸೋಮಣ್ಣ ಅವರು ಕಾರ್ಯಕ್ರಮಕ್ಕೆ ಒಂದೂವರೆ ಗಂಟೆ ತಡವಾಗಿ ಆಗಮಿಸಿದ್ದ ಕಾರಣ ಸಚಿವ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ್ದ ರೈತ ಸಂಘದ ಮುಖಂಡರು, ಸಭೆ ಬಹಿಷ್ಕರಿಸಿದ್ದರು.




























