ಮಂಗಳೂರು: ಹರೇಕಳ ಹಾಜಬ್ಬರ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಬೇಕಾದ್ರೆ ಈ ಸ್ಟೋರಿ ಓದ್ಲೇ ಬೇಕು. ಇದು ಅವರ ವ್ಯಕ್ತಿತ್ವದ ಅನಾವರಣ. ಹಾಜಬ್ಬ ಕಡುಬಡತನ ಹೊಂದಿದರೂ ಮನೆಗೆ ಬಂದವರಿಗೆ ಸತ್ಕಾರ ಮಾಡದೇ ಕಳುಹಿಸಿದವರಲ್ಲ. ತಮ್ಮ ಕುಟುಂಬ ಸದಸ್ಯರಿಗೆ ಅನಾರೋಗ್ಯವಿದ್ದರೂ ಯಾರ ಮುಂದೆಯೂ ವೈಯುಕ್ತಿಕವಾಗಿ ಹಣ ಕೇಳಿದವರಲ್ಲ. ಮನೆಗೆ ಬಂದವರಿಗೆ ಸೀಯಾಳ ನೀಡಿ ಸತ್ಕರಿಸೋದು ಹಾಜಬ್ಬರ ಸಂಪ್ರದಾಯ.
ನವೆಂಬರ್ 8ರಂದು ಹಾಜಬ್ಬರು ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕಾರ ಮಾಡಿದ್ದರು. ನವೆಂಬರ್ 7ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಹಾಜಬ್ಬರ ಮನೆಯಿಂದ ವಿಮಾನ ನಿಲ್ದಾಣದವರೆಗೆ ಪ್ರಯಾಣಿಸಲು ಸ್ವತಃ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ವಾಹನದ ವ್ಯವಸ್ಥೆ ಮಾಡಿದ್ದರು. ಮುಂಜಾನೆ ಮೂರು ಗಂಟೆಯ ವೇಳೆಗೆ ಜಿಲ್ಲಾಧಿಕಾರಿ ಕಳುಹಿಸಿದ ವಾಹನ ಹಾಜಬ್ಬರ ಸಣ್ಣ ಮನೆಯೆದುರು ನಿಂತಿದೆ. ಆಗಾಗಲೇ ಎದ್ದಿದ್ದ ಹಾಜಬ್ಬರು ತಮ್ಮ ಮನೆಗೆ ಬಂದ ವಾಹನದ ಸಿಬ್ಬಂದಿಗೆ ನಡುರಾತ್ರಿಯಲ್ಲೂ ಎಳನೀರು ಕೊಡಲು ಕತ್ತಿ ತೆಗೆದುಕೊಂಡು ಎಳ ನೀರು ಕೆತ್ತಲು ಆರಂಭಿಸಿದ್ದಾರೆ. ಮುಂಜಾನೆ ಆದ ಕಾರಣ ಕತ್ತಿ ಹಾಜಬ್ಬರ ಕೈಗೆ ತಾಗಿದೆ. ನೆತ್ತರು ಚಿಮ್ಮಿದೆ, ತಕ್ಷಣ ಅಲ್ಲಿದ್ದ ಸಿಬ್ಬಂದಿ ಹಾಜಬ್ಬರ ಕೈಗೆ ಬ್ಯಾಂಡೇಜ್ ಮಾಡಿದ್ದಾರೆ. ಕೈಗೆ ತಾಗಿದರೂ ಹಾಜಬ್ಬರು ಮಾತ್ರ ಎಳನೀರನ್ನು ಕೊಟ್ಟು ಸತ್ಕಾರ ಮಾಡಿದ್ದಾರೆ. ಇಲ್ಲಿಯವರೆಗೆ ಬ್ಯಾಂಡೇಜ್ ಹಾಕದ ಹಾಜಬ್ಬರು ಮೊದಲ ಬಾರಿಗೆ ಸಿಬ್ಬಂದಿ ಒತ್ತಾಯಕ್ಕೆ ಮಣಿದು ಬ್ಯಾಂಡೇಜ್ ಹಾಕಿಸಿಕೊಂಡಿದ್ದಾರೆ.
ಕೈಗಾಗಿರುವ ಗಾಯ ಸಣ್ಣದಾದರೂ ಹಾಜಬ್ಬರ ನೈಜ ವ್ಯಕ್ತಿತ್ವ ಆಗಾಧವಾಗಿ ಪ್ರದರ್ಶನವಾಗಿದೆ. ಪದ್ಮಶ್ರೀ ಪುರಸ್ಕೃತರಾದರೂ ಹಾಜಬ್ಬರು ಮಾತ್ರ ತನ್ನ ಸರಳತೆಯಿಂದಲೇ ಎಲ್ಲರಿಗೂ ಮಾದರಿಯಾಗಿದ್ದಾರೆ. ನಾನು, ನನ್ನದೆಂಬ ಸ್ವಾರ್ಥ ಮೆರೆಯುವ ಜನರ ನಡುವೆ ನಡುರಾತ್ರಿಯಲ್ಲೂ ಮನೆಗೆ ಬಂದವರಿಗೆ ಸತ್ಕಾರ ಮಾಡುವ ಹಾಜಬ್ಬರ ಗುಣ ಬಲು ಅಪರೂಪರದ್ದು.





