ಸಮಗ್ರ ನ್ಯೂಸ್: ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ ಅವರು ತಮ್ಮ 8 ವರ್ಷಗಳ ನಿರೂಪಣೆಯ ಪಯಣಕ್ಕೆ ವಿದಾಯ ಹೇಳಿದ್ದಾರೆ.
ಅನುಬಂಧ ಅವಾರ್ಡ್ಸ್, ಸೀರಿಯಲ್ ಸಂತೆ, ರಾಜ ರಾಣಿ, ಕ್ವಾಟ್ಲೆ ಕಿಚನ್, ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಕನ್ನಡಿಗರ ನೆಚ್ಚಿನ ನಿರೂಪಕಿಯಲ್ಲಿ ಒಬ್ಬರಾಗಿದ್ದರು. ‘ಅಕ್ಕ’ ಸೇರಿದಂತೆ ಹಲವು ಧಾರಾವಾಹಿಗಳಲ್ಲೂ ಅನುಪಮಾ ಕಾಣಿಸಿಕೊಂಡಿದ್ದಾರೆ.
ಈಗ ನಿರೂಪಣೆಗೆ ವಿದಾಯ ಹೇಳುತ್ತಿರುವ ಬಗ್ಗೆ ಅನುಪಮಾ ಆನಂದಕುಮಾರ್ ಎನ್ನುವ ಯುಟ್ಯೂಬ್ ಚಾನೆಲ್‌ನಲ್ಲಿ, ಭಾವುಕ ಮಾತುಗಳನ್ನಾಡಿ ತಮ್ಮಿಷ್ಟದ ವೃತ್ತಿಗೆ ವಿದಾಯ ಹೇಳಿದ್ದಾರೆ.
ವಿಡಿಯೊದಲ್ಲಿ ಹೇಳಿದ್ದೇನು?:
‘ನನ್ನ ಪ್ರೀತಿಯ ಕನ್ನಡದ ಮನಸ್ಸುಗಳಿಗೆ ಅನುಪಮಾ ಮಾಡುವ ಪ್ರೀತಿಯ ನಮಸ್ಕಾರ. ಪ್ರತಿ ಕಾರ್ಯಕ್ರಮದಲ್ಲಿ, ಶನಿವಾರ ಮತ್ತು ಭಾನುವಾರ ನಾನು ನಿಮ್ಮನ್ನು ಹೀಗೆ ಸ್ವಾಗತಿಸುತ್ತಿದ್ದೆ. ಆದರೆ ಈಗ ನನ್ನ ಧ್ವನಿ ಹೃದಯದಿಂದ ಬರುತ್ತಿಲ್ಲ. ಏಕೆಂದರೆ ಈ ಮೈಕ್ ಅನ್ನು ಕೆಳಗಿಳಿಸುವ ಸಮಯ ಬಂದಿದೆ. ಇಷ್ಟು ವರ್ಷ ನನ್ನ ತಪ್ಪನ್ನು ತಿದ್ದಿದ ನಿಮಗಾಗಿ ಈ ವಿಡಿಯೊ ಮಾಡಿ 8 ವರ್ಷಗಳ ನಿರೂಪಣೆಯ ಪಯಣವನ್ನು ಮುಗಿಸುವ ಸಮಯ ಬಂದಿದೆ’ ಎಂದು ಭಾವುಕರಾಗಿದ್ದಾರೆ.




























