ಮಂಗಳೂರು: ಕರಾವಳಿಯಲ್ಲಿ ಲವ್ ಜಿಹಾದ್ ಎಂಬ ಶಬ್ದ ಭಾರಿ ಬೆಳಕಿಗೆ ಬರುತ್ತಿದೆ. ಮುಸ್ಲಿಂ ಹುಡುಗರು, ಹಿಂದೂ ಯುವತಿಯರನ್ನು ಪ್ರೇಮದ ಬಲೆಗೆ ಸಿಲುಕಿಸಿ ನಂತರ ಮದುವೆಯ ಹೆಸರಿನಲ್ಲಿ ಹೆಣ್ಣುಮಕ್ಕಳ ಧರ್ಮ ಬದಲಿಸಿ ಮೋಸ ಮಾಡುತ್ತಿದ್ದಾರೆ ಎಂಬ ಆರೋಪ ಸಾಕಷ್ಟಿದೆ.
ಆದರೆ ಮಂಗಳೂರಿನಲ್ಲೊಂದು ಕುತೂಹಲದ ವಿಚಿತ್ರ ಲವ್ ಜಿಹಾದ್ ನಡೆದಿದೆ. ಹಳೆಯ ಸೇಡು ತೀರಿಸಿಕೊಳ್ಳಲು ಮಗಳ ಮಗಳನ್ನೇ ರಾತ್ರೋರಾತ್ರಿ ಎತ್ತಾಕೊಂಡು ಹೋಗಿರುವ ಘಟನೆ ನಡೆದಿದೆ.
ಮುಸ್ಲಿಂ ಧರ್ಮದ ಯುವತಿ ಹಿಂದೂ ಧರ್ಮದ ಯುವಕನನ್ನು ಮದುವೆಯಾಗಿದ್ದಾಳೆ ಎನ್ನುವ ಕಾರಣ, ಸುಮಾರು 22 ವರ್ಷ ಕಾದ ಆಕೆಯ ಕುಟುಂಬಸ್ಥರು, ಮಹಿಳೆಯ ಮಗಳನ್ನು ಅಪಹರಿಸಿ ಮುಸ್ಲಿಂ ಯುವಕನ ಜತೆ ನೆರವೇರಿಸಿ ಧರ್ಮ ಬದಲಿಸುವ ತಯಾರಿ ನಡೆಸಿರುವ ಘಟನೆ ಇದು!. ಏನಿದು ಅಸಲಿ ಕತೆ? ಮುಂದೆ ಓದಿ….
ಗದಗ ಮೂಲದ ಮುಸ್ಲಿಂ ಧರ್ಮದಲ್ಲಿ ಹುಟ್ಟಿದ್ದ ಯುವತಿ 23 ವರ್ಷಗಳ ಹಿಂದೆ ಹಿಂದೂ ಯುವಕನನ್ನು ಪ್ರೀತಿಸಿ ಆತನ ಜತೆ ಮದುವೆಯಾಗಿ ಹಿಂದೂ ಧರ್ಮ ಸ್ವೀಕರಿಸಿ ಯಶೋದಾ ಆಗಿ ಬದಲಾಗಿದ್ದಳು. ಇದು ಆಕೆಯ ತವರು ಮನೆಯವರಿಗೆ ಸಹಿಸಲು ಅಸಾಧ್ಯವಾಗಿತ್ತು. ಇದೇ ಸೇಡಿನಿಂದ ಆಕೆಯ ಕುಟುಂಬ ಕೊತಕೊತ ಕುದಿಯುತ್ತಿತ್ತು. ಸರಿಯಾದ ಸಮಯಕ್ಕೆ ಕಾದು ಸೇಡು ತೀರಿಸಿಕೊಳ್ಳುವ ತವಕದಲ್ಲಿ ಆಕೆಯ ಅಣ್ಣಂದಿರು ಹಾಗೂ ಕುಟುಂಬಸ್ಥರು ಕಾದು ಕುಳಿತಿದ್ದರು.
ಈ ಮದುವೆಯಿಂದ ಯಶೋದಾಗೆ ರೇಷ್ಮಾ ಎಂಬ ಮಗಳು ಹುಟ್ಟಿದಳು. ರೇಷ್ಮಾಗೆ ಈಗ 22 ವರ್ಷ. ಆಕೆಗೆ ಹಿಂದೂ ಯುವಕನ ಜತೆ ಯಶೋದಾ ದಂಪತಿ ನಿಶ್ಚಿತಾರ್ಥ ಮಾಡಿದ್ದರು. ಆದರೆ ಮೊದಲೇ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಯಶೋದಾ ತವರು ಮನೆಯವರು ನಿಶ್ಚಿತಾರ್ಥ ಆಗುತ್ತಿದ್ದಂತೆಯೇ ರೇಷ್ಮಾಳನ್ನು ಅಪ್ಪ-ಅಮ್ಮನಿಗೆ ತಿಳಿಯದಂತೆ ಕರೆದುಕೊಂಡು ಹೋಗಿದ್ದಾರೆ. ಮೊದಲೇ ಆಕೆಯ ಮನವೊಲಿಸಿದ್ದರಿಂದ ನಿಶ್ಚಿತಾರ್ಥಕ್ಕೆಂದು ತಂದಿಟ್ಟಿದ್ದ ಚಿನ್ನಾಭರಣ, ಮನೆಯಲ್ಲಿದ್ದ ಹಣದೊಂದಿಗೆ ಆಕೆ ರೆಡಿಯಾಗಿದ್ದಳು. ಅವಳನ್ನು ಇದೀಗ ಕರೆದುಕೊಂಡು ಹೋಗಿರುವ ಯಶೋದಾಳ ಕುಟುಂಬಸ್ಥರು ಆಕೆಗೆ ಅಕ್ಕನ ಮಗನ ಜತೆಯೇ ಮದುವೆ ಮಾಡಿಸಿದ್ದಾರೆ ಎಂಬ ಆರೋಪವಿದೆ. ಏಕೆಂದರೆ ಮನೆಯಲ್ಲಿದ್ದ ಹಣವನ್ನೆಲ್ಲಾ ಆಕೆ ತನ್ನ ಅಕ್ಕನ ಮಗ ಅಕ್ರಂ ಹೆಸರಿಗೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.






