ಬೆಂಗಳೂರು. ಕೇಂದ್ರ ಸಚಿವ ಸಂಪುಟಕ್ಕೆ ಡಿ.ವಿ ಸದಾನಂದ ಗೌಡ ರಾಜೀನಾಮೆ ನೀಡಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಬೆಳವಣಿಗೆಗಳು ಗರಿಗೆದರಿವೆ. ಕೇಂದ್ರ. ಮಂತ್ರಿಯಾಗಿದ್ದ ಸದಾನಂದ ಗೌಡರು ರಾಜೀನಾಮೆ ನೀಡಿದ್ದು, ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲಿ ಈಗಾಗಲೇ ಯಡಿಯೂರಪ್ಪರವರನ್ನು ಕೆಳಗಿಳಿಸುವ ಕುರಿತಂತೆ ಹಲವು ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದ್ದು, ಈ ಬೆಳವಣಿಗೆಗಳನ್ನು ಬಿಜೆಪಿ ದೆಹಲಿ ಹೈಕಮಾಂಡ್ ಕೂಲಂಕುಷವಾಗಿ ಪರಿಶೀಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ನಾಯಕರು ಹಲವು ಬಾರಿ ಬೆಂಗಳೂರಿಗೂ, ರಾಜ್ಯನಾಯಕರು ದೆಹಲಿಗೂ ಪರೇಡ್ ನಡೆಸಿರುವುದು ಗೊತ್ತೇ ಇದೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನ ಅಬ್ಬರ ಕಡಿಮೆ ಆಗಿರುವುದರಿಂದ ಯಡಿಯೂರಪ್ಪರನ್ನು ಬದಲಾಯಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಅಲ್ಲದೇ ರಾಜ್ಯರಾಜಕಾರಣದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಯಡಿಯೂರಪ್ಪರವರನ್ನು ಗೌರವಯುತವಾಗಿ ನಡೆಸಿಕೊಂಡು ತೆಲಂಗಾಣದ ರಾಜ್ಯಪಾಲರಾಗಿ ನೇಮಿಸುವ ಕುರಿತಂತೆ ಕೇಂದ್ರದಲ್ಲಿ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.
ಈ ನಡುವೆ ಕಳಂಕರಹಿತ ರಾಜಕಾರಣಿ ಎಂಬ ಹೆಸರಿಗೆ ಪಾತ್ರವಾಗಿರುವ ಡಿ.ವಿ.ಎಸ್ ರವರನ್ನು ಏಕಾಏಕಿ ಕೇಂದ್ರ ಸಂಪುಟದಿಂದ ಕೈಬಿಟ್ಟಿದ್ದು, ಗೌಡರು ರಾಜ್ಯ ರಾಜಕಾರಣಕ್ಕೆ ಮತ್ತೆ ವಾಪಾಸ್ಸಾಗುವ ಸೂಚನೆ ಎನ್ನಲಾಗಿದೆ. ರಾಜ್ಯದಲ್ಲಿ ಒಕ್ಕಲಿಗ ಮುಖಂಡನಿಗೆ ಮತ್ತೆ ಮಣೆ ಹಾಕಿ ಎಲ್ಲಾ ಅಡಚಣೆಗಳಿಂದ ಪಾರು ಮಾಡುವ ಕೇಂದ್ರದ ಆಲೋಚನೆಗಳು ಮತ್ತು ಭಿನ್ನಮತೀಯರನ್ನು ಶಮನಗೊಳಿಸುವ ಕೊನೆಯ ಅಸ್ತ್ರ ಡಿ.ವಿ ಸದಾನಂದ ಗೌಡರು ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಹೀಗೇನಾದರೂ ಆದರೆ ಮತ್ತೆ ಕರ್ನಾಟಕದಲ್ಲಿ ಹೊಸತೊಂದು ಅಧ್ಯಾಯ ತೆರೆದುಕೊಳ್ಳುವುದರಲ್ಲಿ ಸಂಶಯವಿಲ್ಲ.





