ಮಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವವರು ನಿಜವಾದ ರೈತರಲ್ಲ ಅವರೆಲ್ಲರೂ ನಕಲಿಗಳು ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದ ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು, ರೈತ ಸಂಘಟನೆಗಳ ಆಕ್ರೋಶದ ಬೆನ್ನಲ್ಲೇ ರೈತರ ಕ್ಷಮೆ ಯಾಚಿಸಿದ್ದಾರೆ.
ಯಕ್ಷಗಾನ ರಂಗದಲ್ಲಿ ಮೂವರು ಕಲಾವಿದರು ರೈತರನ್ನು ಅಪಹಾಸ್ಯ ಮಾಡಿ ತುಳುವಿನಲ್ಲಿ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವೇದಿಕೆಯಲ್ಲಿ ಸಹ ಕಲಾವಿದರೊಂದಿಗೆ ಹಾಸ್ಯ ಸಂಭಾಷಣೆ ನಡೆಸಿದ್ದ ದಿನೇಶ್, “ಹಲವು ತಿಂಗಳುಗಳಿಂದ ಹಸಿರು ಶಾಲು, ಟೊಪಿ ಧರಿಸಿ ದೆಹಲಿ ಗಡಿಗಳಲ್ಲಿ ಹೋರಾಟ ಮಾಡುತ್ತಿರುವವರು ನಿಜವಾದ ರೈತರಲ್ಲ, ಅವರೆಲ್ಲರು ನಕಲಿಗಳು, ಒಂದು ವೇಳೆ ರೈತರು ರಸ್ತೆಯಲ್ಲಿ ಕುಳಿತಿದ್ದರೆ ನಮಗೆ ತಿನ್ನಲು ಅಕ್ಕಿ ಎಲ್ಲಿಂದ ಸಿಗುತ್ತಿತ್ತು? ನಿಜವಾದ ರೈತರು ಇನ್ನೂ ಗದ್ದೆಯಲ್ಲೇ ಇದ್ದಾರೆ. ಈಗ ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವುದು ತಂತಿಯ ಮೇಲೆ ನಡೆಯುವ ಮಂಗನಂತಹ ವ್ಯಕ್ತಿಯಲ್ಲ. ಬದಲಿಗೆ ಸಿಂಹದಂತಹ ವ್ಯಕ್ತಿ ಅಧಿಕಾರದಲ್ಲಿದ್ದಾರೆ. ನೀವು 6 ತಿಂಗಳಲ್ಲ 6 ವರ್ಷ ಹೋರಾಟ ನಡೆಸಿದರೂ ಪ್ರಯೋಜನವಿಲ್ಲ. ಕೃಷಿ ಕಾಯ್ದೆಯಿಂದ ರೈತರಿಗೆ ದಲ್ಲಾಳಿಗಳ ಕಾಟ ಇಲ್ಲದಂತಾಗುತ್ತದೆ. ರೈತ ತಾನು ಬೆಳೆದ ಬೆಳೆಯನ್ನು ನೇರವಾಗಿ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಲು ಈ ಕಾಯ್ದೆ ಅವಕಾಶ ಮಾಡಿ ಕೊಡುತ್ತದೆ. ಇಂತಹ ಕಾಯ್ದೆಯನ್ನು ವಿರೋಧಿಸುತ್ತಿರುವವರು ನಿಜವಾದ ರೈತರಲ್ಲ. ಅವರೆಲ್ಲ ನಕಲಿ ರೈತರು” ಎಂದು ವ್ಯಂಗ್ಯವಾಡಿದ್ದರು.
ರೈತರ ಕುರಿತಾದ ದಿನೇಶ್ ಅವರ ಅವಹೇಳನಕಾರಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ರಾಜ್ಯದ ರೈತ ಸಂಘಟನೆಗಳ ನಾಯಕರು ಹಾಗೂ ರೈತಪರರು ಹಾಸ್ಯ ಕಲಾವಿದನ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು.
ರೈತ ಚಳವಳಿಯ ಬಗ್ಗೆ ನಡೆಸುತ್ತಿರುವ ಅಪಪ್ರಚಾರಕ್ಕೆ ಯಕ್ಷಗಾನ ಕಲೆಯನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ. ಆ ಮೂಲಕ ಯಕ್ಷಗಾನವನ್ನೂ ಕೆಡಿಸುವ ಹುನ್ನಾರ ನಡೆಯುತ್ತಿದೆ’ ಎಂದು ಕರ್ನಾಟಕ ಪ್ರಾಂತ ಪ್ರದೇಶ ರೈತ ಸಂಘದ ಉಪಾಧ್ಯಕ್ಷ ಯಾದವ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, “ಯಕ್ಷಗಾನದ ಬಗ್ಗೆ ಗೌರವ ಇದೆ. ಆದರೆ, ಜೀವನದ ಅನುಭವ ಇಲ್ಲದವರು ಕಲೆಯ ಮೂಲಕ ಅನ್ನದಾತರನ್ನೇ ಹೀಯಾಳಿಸುವುದು ನೋವುಂಟು ಮಾಡಿದೆ’ ಎಂದು ಬೇಸರ ವ್ಯಕ್ತ ಪಡಿಸಿದ್ದರು.
ಇದಾದ ಬೆನ್ನಲ್ಲೇ ರೈತರ ಕ್ಷಮೆ ಯಾಚಿಸಿರುವ ದಿನೇಶ್, “ಯಾವುದೇ ರಾಜಕೀಯ ಅಥವಾ ಯಾರನ್ನಾದರೂ ನೋಯಿಸುವ ಉದ್ದೇಶದಿಂದ ಯಕ್ಷಗಾನದಲ್ಲಿ ನಾನು ಈ ರೀತಿಯ ಹೇಳಿಕೆ ನೀಡಿಲ್ಲ. ಕಲಾವಿದನಾಗಿ ಸಾಂದರ್ಭಿಕವಾಗಿ ನನ್ನ ಸಹ ಕಲಾವಿದನೊಂದಿಗೆ ಸಂಭಾಷಣೆ ನಡೆಸಿದ್ದೇನೆ. ರೈತರನ್ನಾಗಲಿ ಅಥವಾ ರೈತ ಹೋರಾಟವನ್ನಾಗಲಿ ಅಪಹಾಸ್ಯ ಮಾಡುವ ಉದ್ದೇಶ ನನ್ನದಾಗಿರಲಿಲ್ಲ” ಎಂದಿದ್ದಾರೆ. ಮುಂದುವರೆದು ಮಾತನಾಡಿರುವ ಅವರು, “ನನ್ನನ್ನು ಒಳಗೊಂಡಂತೆ ಸುಮಾರು 2 ಸಾವಿರ ಮಂದಿ ಯಕ್ಷಗಾನ ಕಲಾವಿದರು ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ನಮ್ಮ ಅನ್ನದಾತರು ನನ್ನ ಹೇಳಿಕೆಯಿಂದ ರೈತರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.