ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ರಾಜ್ಯದ ಕೆಲವು ಪ್ರತ್ಯೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ, ಗುಡುಗು ಸಹಿತ ಮಳೆ ಹಾಗೂ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಅದರಲ್ಲೂ ನವೆಂಬರ್ 5 ಮತ್ತು 6ರಂದು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
ಹವಾಮಾನ ಮುನ್ಸೂಚನೆಯ ಪ್ರಕಾರ, ಕರಾವಳಿ ಕರ್ನಾಟಕ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಮಳೆಯೊಂದಿಗೆ ಗುಡುಗು ಹಾಗೂ ಬಲವಾದ ಗಾಳಿಯೂ ಬೀಸಬಹುದು. ಇನ್ನೊಂದೆಡೆ, ಉತ್ತರ ಒಳನಾಡು ಕರ್ನಾಟಕದಲ್ಲಿ ಮಳೆಯ ಪ್ರಮಾಣ ತುಸು ಕಡಿಮೆ ಇರಲಿದೆ. ಈ ಭಾಗದ ಹಲವು ಪ್ರದೇಶಗಳಲ್ಲಿ ಬಿಸಿಲು ಮತ್ತು ಒಣಹವೆ ಮುಂದುವರಿಯುವ ಸಾಧ್ಯತೆಯಿದೆ. ಇದರ ಜೊತೆಗೆ ರಾಜ್ಯದ ಹಲವು ಭಾಗಗಳಲ್ಲಿ ರಾತ್ರಿ ಮತ್ತು ಮುಂಜಾನೆಯ ಸಮಯದಲ್ಲಿ ಚಳಿ ಹಾಗೂ ಮಂಜು ಆವರಿಸುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮಳೆ ಮತ್ತು ಗುಡುಗು ಸಹಿತ ವಾತಾವರಣ ಕಂಡುಬಂದಿದೆ. ಮುಂದಿನ ಕೆಲವು ದಿನಗಳಲ್ಲಿಯೂ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಐಎಂಡಿಯ ಏಳು ದಿನಗಳ ಮುನ್ಸೂಚನೆಯ ಪ್ರಕಾರ, ರಾಜ್ಯದ ವಿವಿಧ ಭಾಗಗಳಲ್ಲಿ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಪರ್ಯಾಯವಾಗಿ ಕಂಡುಬರಬಹುದು. ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೆಲವೆಡೆ ಗುಡುಗು ಸಹಿತ ಮಳೆಯೂ ಸುರಿಯಬಹುದು.
ಕಳೆದ 24 ಗಂಟೆಗಳ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಹವಾಮಾನ ಇಲಾಖೆಯ ಮಳೆ ದಾಖಲೆಗಳ ಪ್ರಕಾರ, ಕೆಲವು ಸ್ಥಳಗಳಲ್ಲಿ 100 ಮಿ.ಮೀ.ಗಿಂತಲೂ ಅಧಿಕ ಮಳೆ ಸುರಿದಿದೆ.









