ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ರಸ್ತೆಗಿಳಿದ ‘ಪಿಂಕ್ ಆಟೋ’

ಸಮಗ್ರ ನ್ಯೂಸ್: ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿನೂತನ ಯೋಜನೆಯೊಂದು ಗಮನ ಸೆಳೆಯುತ್ತಿದೆ. ಮಹಿಳೆಯರೇ ಚಾಲನೆ ಮಾಡುವ ಪಿಂಕ್ ಎಲೆಕ್ಟ್ರಿಕ್ ಆಟೋರಿಕ್ಷಾಗಳು ಇದೀಗ ಸುಳ್ಯ ಹಾಗೂ ಬಂಟ್ವಾಳದ ರಸ್ತೆಗಳಲ್ಲಿ ಸಂಚರಿಸುತ್ತಿವೆ.

. Ad Widget . Ad Widget . Ad Widget

ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3181 ವತಿಯಿಂದ ಜಾರಿಗೊಳಿಸಲಾಗಿರುವ ‘ಸಖಿ’ ಯೋಜನೆಯು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವಂತ ಉದ್ಯೋಗ ಆರಂಭಿಸಲು ಹೊಸ ಅವಕಾಶ ಕಲ್ಪಿಸುತ್ತಿದೆ.

. Ad Widget .

ಮಹಿಳೆಯರ ಸುರಕ್ಷತೆ ಹಾಗೂ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಆರಂಭಿಸಲಾಗಿರುವ ಈ ಯೋಜನೆ ಸಾರ್ವಜನಿಕರ ಗಮನ ಸೆಳೆದಿದೆ. ವಿಶೇಷವಾಗಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ವಿಶ್ವಾಸಾರ್ಹ ಸಾರಿಗೆ ಸೇವೆ ಒದಗಿಸುವುದರ ಜೊತೆಗೆ ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಜೀವನೋಪಾಯ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಅಷ್ಟಕ್ಕೂ ಈ ಪಿಂಕ್ ಆಟೋ ಯೋಜನೆಯ ವಿಶೇಷತೆ ಏನು ಅಂದ್ರೆ, ಮಹಿಳೆಯರೇ ಈ ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಚಾಲನೆ ಮಾಡುತ್ತಾರೆ. ಇದರಿಂದ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ವಾಹನ ಚಾಲಕಿಯರಿಗೂ ಸ್ವಂತ ಆದಾಯ ಗಳಿಸುವ ಅವಕಾಶ ದೊರೆಯುತ್ತಿದೆ.

ಕುಟುಂಬ ನಿರ್ವಹಣೆಗೆ ಆರ್ಥಿಕವಾಗಿ ಪರದಾಡುತ್ತಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಉದ್ಯೋಗದ ಅವಕಾಶ ಕಲ್ಪಿಸುವ ಪ್ರಯತ್ನವನ್ನು ರೋಟರಿ ಸಂಸ್ಥೆ ಮಾಡುತ್ತಿದೆ. ಸ್ವಂತ ಉದ್ಯೋಗ ಆರಂಭಿಸಲು ಬಂಡವಾಳದ ಕೊರತೆ ಎದುರಿಸುತ್ತಿರುವ ಮಹಿಳೆಯರಿಗೆ ಈ ಯೋಜನೆ ನೆರವಾಗುತ್ತಿದೆ.

ಇದೇ ಯೋಜನೆಯಡಿ ಸುಳ್ಯದ ಜಯನಗರ ನಿವಾಸಿ ಗೀತಾ ಕೆ.ಆರ್. ಅವರಿಗೆ ಸುಳ್ಯ ಸಿಟಿ ರೋಟರಿ ಕ್ಲಬ್ ವತಿಯಿಂದ ಆರ್ಥಿಕ ನೆರವು ನೀಡಿ ಪಿಂಕ್ ಎಲೆಕ್ಟ್ರಿಕ್ ಆಟೋ ಹಸ್ತಾಂತರಿಸಲಾಗಿದೆ. ಇದರಿಂದ ಗೀತಾ ಅವರಿಗೆ ಸ್ವಂತ ಉದ್ಯೋಗದ ಮೂಲಕ ಆದಾಯ ಗಳಿಸುವ ಅವಕಾಶ ಲಭ್ಯವಾಗಿದೆ.

ಇನ್ನು ಯೋಜನೆಯಡಿ ಆಟೋರಿಕ್ಷಾ ಖರೀದಿಸಲು ರೋಟರಿ ಕ್ಲಬ್ ವತಿಯಿಂದ ಮುಂಗಡ ಹಣವಾಗಿ 90 ಸಾವಿರ ರೂಪಾಯಿವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ವಾಹನದ ಉಳಿದ ಮೊತ್ತವನ್ನು ಫಲಾನುಭವಿ ಮಹಿಳೆಯರು ತಮ್ಮ ದೈನಂದಿನ ಆದಾಯದಿಂದ ಕಂತುಗಳ ರೂಪದಲ್ಲಿ ಮರುಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ವಿಶೇಷ ಅಂದ್ರೆ, ಆಟೋ ಚಾಲನೆ ಮಾಡಲು ಬಾರದ ಮಹಿಳೆಯರೂ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಮೈಸೂರಿನ ತಳಿರು ಫೌಂಡೇಶನ್ ಹಾಗೂ ಟಿವಿಎಸ್ ಮೋಟರ್ ಕಂಪನಿಯ ಸಹಯೋಗದಲ್ಲಿ ಮಹಿಳೆಯರಿಗೆ ವಿಶೇಷ ಚಾಲನಾ ತರಬೇತಿ ನೀಡಲಾಗುತ್ತಿದೆ.

Leave a Comment

Your email address will not be published. Required fields are marked *