ಸಮಗ್ರ ನ್ಯೂಸ್: ಮುನ್ಸೂಚನೆಯಂತೆ ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತ ತೀವ್ರಗೊಂಡು ಹವಾಮಾನ ವ್ಯವಸ್ಥೆಯಲ್ಲಿ ತೀವ್ರ ಬದಲಾವಣೆಯಾಗಿದೆ. ವೈಪರೀತ್ಯವು ತೀವ್ರ ಸ್ವರೂಪದೊಂದಿಗೆ ‘ಅರ್ನಾಬ್’ ಚಂಡಮಾರುತವಾಗಿ ಬದಲಾಗಿದೆ. ಇದರ ಪರಿಣಾಮವಾಗಿ ದಕ್ಷಿಣ ಭಾರತದ ಕರಾವಳಿ ರಾಜ್ಯಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆಗಳಿವೆ ಎಂದು ಐಎಂಡಿ ತಿಳಿಸಿದೆ.
ಹವಾಮಾನ ಇಲಾಖೆ ನಿಗದಿಯಂತೆ ಸೋಮವಾರ (ಅಕ್ಟೋಬರ್ 26) ಚಂಡಮಾರುತದ ಅಬ್ಬರ ಶುರುವಾಗಿದೆ. ಪುದುಚೆರಿ, ಆಂಧ್ರ ಪ್ರದೇಶ, ಓಡಿಶಾ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಸೇರಿದಂತೆ ಕರಾವಳಿ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಪೂರ್ವ-ಮಧ್ಯ ಮತ್ತು ಹೊಂದಿಕೊಂಡಿರುವ ಆಗ್ನೇಯ ಬಂಗಾಳಕೊಲ್ಲಿಯಲ್ಲಿದ್ದ ‘ಆಳವಾದ ವಾಯುಭಾರ ಕುಸಿತ ಇಂದು ‘ಅರ್ನಾಬ್’ (Arnab) ಎಂಬ ಚಂಡಮಾರುತವಾಗಿ ತೀವ್ರಗೊಂಡಿದೆ. ಇಂದು ಬೆಳಗ್ಗೆಯಿಂದ ಚಂಡಮಾರುತ ಗಾಳಿಯು ಗಂಟೆಗೆ ಸುಮಾರು 15 ಕಿ.ಮೀ ವೇಗದಲ್ಲಿ ಪಶ್ಚಿಮ ದಿಕ್ಕಿನತ್ತ ಚಲಿಸುತ್ತಿದ್ದು, ಸದ್ಯ ಬಂಗಾಳಕೊಲ್ಲಿಯಲ್ಲಿ ನೆಲೆಗೊಂಡಿದೆ. ಮುಂದಿನ 24 ಗಂಟೆಗಳಲ್ಲಿ ಇದರ ತೀವ್ರತೆ ಇನ್ನಷ್ಟು ಹೆಚ್ಚಾಗುವ ಸಂಭವವಿದ್ದು, ಆಂಧ್ರ ಪ್ರದೇಶ, ಓಡಿಶಾ ಭಾಗದಲ್ಲಿ ಅಪ್ಪಳಿಸುವ ಲಕ್ಷಣಗಳು ಇವೆ ಎಂದು ಹೇಳಲಾಗುತ್ತಿದೆ.
ನಾಳೆ ಮಂಗಳವಾರ (ಅ.27) ಬೆಳಗ್ಗೆ ಈ ಚಂಡಮಾರುತ ‘ತೀವ್ರ ಚಂಡಮಾರುತ’ವಾಗಿ ಮತ್ತು ಮಂಗಳವಾರ ಸಂಜೆಯ ವೇಳೆಗೆ ‘ಅತ್ಯಂತ ತೀವ್ರ ಚಂಡಮಾರುತ’ವಾಗಿ ಬದಲಾಗಲಿದೆ. ಮುಂದೆ ಅಕ್ಟೋಬರ್ 28ಕ್ಕೆ ಕರಾವಳಿಗೆ ಅಪ್ಪಳಿಸಲಿದೆ. ಉತ್ತರ ಭಾರತದ ಕೆಲವು ಭಾಗಗಳಲ್ಲಿ ನೇರ ಪರಿಣಾಮ ಬೀರುವುದಿಲ್ಲ. ದೆಹಲಿಯಲ್ಲಿ ತಕ್ಕಮಟ್ಟಿಗಿನ ಬದಲಾವಣೆ ಆಗಲಿದ್ದು, ವ್ಯಾಪಕ ಮಳೆ ಆಗಲಿದೆ ಎಂದು ಐಎಂಡಿ ತಿಳಿಸಿದೆ.









