ಸಮಗ್ರ ನ್ಯೂಸ್: ಬದುಕಿಗೆ ಆಸರೆಯಾಗಿರುವ ಆಟೋ ಸಾವಿರಾರು ಕಿಲೋಮೀಟರ್ ದೂರದ ಕಾಶ್ಮೀರದತ್ತ ನಾಲ್ವರು ಸ್ನೇಹಿತರ ಕನಸನ್ನು ಹೊತ್ತು ಸಾಗುತ್ತಿದೆ. ಊರಿನ ರಸ್ತೆಗಳಲ್ಲಿ ಸಲೀಸಾಗಿ ಓಡುತ್ತಿದ್ದ ಇದು, ಇಂದು ಹಿಮಾಚ್ಛಾದಿತ ಪರ್ವತಗಳ ನಡುವೆ ಕೊರೆಯುವ ಚಳಿಯನ್ನು ಎದುರಿಸುತ್ತಿದೆ.
ಈ ಸಾಹಸಕ್ಕೆ ಕೈಹಾಕಿರುವುದು ದ.ಕ. ಜಿಲ್ಲೆ ಉಳ್ಳಾಲ ತಾಲೂಕಿನ ದೇರಳಕಟ್ಟೆಯ ನಾಲ್ವರು ಯುವಕರು. ಸುಮಾರು ಆರೇಳು ವರ್ಷಗಳಿಂದ ಮನಸ್ಸಿನಲ್ಲಿದ್ದ ಕಾಶ್ಮೀರ ಪ್ರವಾಸದ ಕನಸಿಗೆ ಅ.10ರಂದು ಚಾಲನೆ ನೀಡಿದವರು ದೇರಳಕಟ್ಟೆಯ ಸಾದಿಕ್, ಹಜೀಮ್, ಹಸನ್ ಮತ್ತು ಹಫೀದ್. ಐಷಾರಾಮಿ ಕಾರುಗಳ ಬದಲಿಗೆ ಸಾಮಾನ್ಯ ಆಟೋರಿಕ್ಷಾವನ್ನೇ ಆಯ್ಕೆ ಮಾಡಿಕೊಂಡ ಈ ನಾಲ್ವರು ಸ್ನೇಹಿತರು, ತಮ್ಮ ಕನಸಿಗೆ ಅದನ್ನೇ ಸಾರಥಿಯನ್ನಾಗಿಸಿಕೊಂಡಿದ್ದಾರೆ.
ಈ ಹಿಂದೆ ನಾಲ್ವರೂ ಆಟೋರಿಕ್ಷಾ ಚಾಲನೆ ಹಾಗೂ ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಸಾದಿಕ್ ವೈಫೈ ಟೆಕ್ನಿಷಿಯನ್, ಹಜೀಮ್ ವೆಲ್ಡಿಂಗ್ ಕ್ಷೇತ್ರದಲ್ಲಿ, ಹಸನ್ ಆಟೋ ಚಾಲಕರಾಗಿ ಹಾಗೂ ಹಫೀದ್ ಕ್ರಾಫ್ಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಹಿಂದೆ ಆಟೋರಿಕ್ಷಾದಲ್ಲೇ ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರಯಾಣಿಸಿದ್ದರು. ಕಾಶ್ಮೀರದವರೆಗೂ ಇದೇ ರೀತಿಯಲ್ಲಿ ತೆರಳಬೇಕೆಂಬ ಆಸೆ ಹಲವು ಬಾರಿ ಮೂಡಿದ್ದರೂ, ವಿವಿಧ ಕಾರಣಗಳಿಂದ ಯೋಜನೆ ಮುಂದೂಡಿಕೆಯಾಗುತ್ತಿತ್ತು.
ಸಾದಿಕ್ ಅವರ 2017ರ ಮಾದರಿಯ ಆಟೋರಿಕ್ಷಾವನ್ನು ಈ ಪ್ರಯಾಣಕ್ಕೆ ಸಿದ್ಧಪಡಿಸಲಾಗಿದೆ. ವಾಹನದ ತಾಂತ್ರಿಕ ಸ್ಥಿತಿ ಪರಿಶೀಲಿಸಿ, ದೀರ್ಘ ಪ್ರಯಾಣಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡು ಯಾತ್ರೆ ಆರಂಭಿಸಿದ್ದಾರೆ.
ಪ್ರವಾಸಕ್ಕೆ ಸುಮಾರು 1.5 ಲಕ್ಷ ರು. ವೆಚ್ಚ ಅಂದಾಜು ಮಾಡಿಕೊಂಡು ಹೊರಟಿದ್ದ ಸ್ನೇಹಿತರಿಗೆ, ಈಗಾಗಲೇ ಒಂದು ಲಕ್ಷ ರು.ಗಿಂತ ಅಧಿಕ ಖರ್ಚಾಗಿದೆ. ಪ್ರಯಾಣ ಪೂರ್ಣಗೊಳ್ಳುವ ವೇಳೆಗೆ ಒಟ್ಟು ವೆಚ್ಚ ಎಷ್ಟಾಗಬಹುದು ಎಂಬುದನ್ನು ಕಾದು ನೋಡಬೇಕಿದೆ ಎಂದು ಹಫೀದ್ ತಿಳಿಸಿದ್ದಾರೆ.
ಪ್ರವಾಸದ ವೇಳೆ ಎದುರಾದ ಅತಿ ದೊಡ್ಡ ಸವಾಲು ಆಟೋರಿಕ್ಷಾದ ಗೇರ್ ಜಾಮ್ ಸಮಸ್ಯೆ. ಲಡಾಖ್ ಪ್ರದೇಶದಲ್ಲಿ ಎತ್ತರದ ಪರ್ವತ ಮಾರ್ಗಗಳಲ್ಲಿ ಸಂಚರಿಸುವಾಗ ವಾಹನದ ಗೇರ್ ಜಾಮ್ ಆಗುವ ಸಮಸ್ಯೆ ಎದುರಾಗಿದೆ. ಸುಮಾರು 15 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ವಾಹನದ ಗೇರ್ ಫ್ರೀಜ್ ಆಗಿದ್ದರಿಂದ ಮುಂದಕ್ಕೆ ಸಾಗಲು ತೊಂದರೆಯಾಗಿದೆ. ಈ ಸಮಸ್ಯೆಯಿಂದಾಗಿ ಒಂದು ದಿನದ ಪ್ರಯಾಣ ವ್ಯರ್ಥವಾಗಿದೆ. ಕೆಲವು ಪ್ರದೇಶಗಳಲ್ಲಿ ವಾಹನ ದುರಸ್ತಿ ಮಾಡಿಸಲು ಮೆಕ್ಯಾನಿಕ್ಗಳು ಸಿಗದಿರುವುದು ಮತ್ತಷ್ಟು ತೊಂದರೆ ಉಂಟುಮಾಡಿದೆ.
ಪ್ರಯಾಣದ ವೇಳೆ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸುಮಾರು 20 ಲೀಟರ್ ಪೆಟ್ರೋಲ್ ಹೆಚ್ಚುವರಿಯಾಗಿ ಸಂಗ್ರಹಿಸಿಟ್ಟುಕೊಂಡಿದ್ದರು. ಆದರೂ, ಎತ್ತರದ ಪ್ರದೇಶಗಳಲ್ಲಿ ವಾಹನದ ತಾಂತ್ರಿಕ ಸಮಸ್ಯೆ ಎದುರಾದಾಗ ಸ್ಥಳೀಯವಾಗಿ ಅಗತ್ಯ ಸೌಲಭ್ಯಗಳು ಸಿಗದಿರುವುದು ಕಷ್ಟಕರವಾಗಿದೆ.









