ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯು ಪ್ರಸಕ್ತ 2026ನೇ ಸಾಲಿನ ಅರ್ಧವಾರ್ಷಿಕ ಅವಧಿಯ ಅಂದರೆ ಏಪ್ರಿಲ್‌ನಿಂದ ಸ್ಟೆಪ್ಟೆಂಬರ್ವರೆಗಿನ ಮದ್ಯ ಮಾರಾಟ ಹಾಗೂ ರಾಜಸ್ವ ಸಂಗ್ರಹದ ವರದಿಯನ್ನು ಬಿಡುಗಡೆ ಮಾಡಿದೆ. 2025ಕ್ಕೆ ಹೋಲಿಸಿದರೆ ಈ ಬಾರಿ ಮದ್ಯ ಮಾರಾಟ ಮತ್ತು ರಾಜಸ್ವ ಸಂಗ್ರಹದಲ್ಲಿ ಗಣನೀಯ ಏರಿಕೆ ಕಂಡಿದೆ.
ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು 22,191.63 ಕೋಟಿ ರೂ ಅಬಕಾರಿ ರಾಜಸ್ವ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತ 2,621.40 ಕೋಟಿ ರೂ ಹೆಚ್ಚಳವಾಗಿದೆ. ಆ ಮೂಲಕ ಒಟ್ಟು ಅಬಕಾರಿ ರಾಜಸ್ವ ಸಂಗ್ರಹದಲ್ಲಿ ಶೇಕಡಾ 13.39 ರಷ್ಟು ಏರಿಕೆ ಕಂಡುಬಂದಿದೆ ಎಂದು ಅಬಕಾರಿ ಆಯುಕ್ತರು ತಿಳಿಸಿದ್ದಾರೆ.
ಬರದ ಛಾಯೆಯ ನಡುವೆಯೂ ರಾಜ್ಯದಲ್ಲಿ ಬಿಯರ್ ಮಾರಾಟದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅರ್ಧವಾರ್ಷಿಕ ಅವಧಿಯಲ್ಲಿ ಒಟ್ಟು 275.96 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 41.32 ರಷ್ಟು ಹೆಚ್ಚಳವಾಗಿದೆ. ಕೇವಲ ಬಿಯರ್ ಮಾರಾಟದಿಂದಲೇ ಸರ್ಕಾರಕ್ಕೆ 3,377.88 ಕೋಟಿ ರೂ ರಾಜಸ್ವ ಸಂಗ್ರಹವಾಗಿದೆ.
ಇನ್ನು ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 346.83 ಲಕ್ಷ ಪೆಟ್ಟಿಗೆ ಐಎಂಎಎಲ್ ಮದ್ಯ ಮಾರಾಟವಾಗಿದೆ. ಮೊದಲ ತ್ರೈಮಾಸಿಕದಲ್ಲಿ 175.14 ಲಕ್ಷ ಪೆಟ್ಟಿಗೆ ಹಾಗೂ ದ್ವಿತೀಯ ತ್ರೈಮಾಸಿಕದಲ್ಲಿ 171.69 ಲಕ್ಷ ಪೆಟ್ಟಿಗೆ ಐಎಂಎಎಲ್ ಸೇಲ್ ಆಗಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಐಎಂಎಎಲ್ ಮಾರಾಟದಲ್ಲಿ ಶೇಕಡಾ 1.14 ರಷ್ಟು ಪ್ರಗತಿಯಾಗಿದ್ದು, ಐಎಂಎಎಲ್ ಒಂದರಿಂದಲೇ 17,424.57 ಕೋಟಿ ರೂ ರಾಜಸ್ವ ಅಬಕಾರಿ ಬೊಕ್ಕಸಕ್ಕೆ ಹರಿದುಬಂದಿದೆ. ಕಳೆದ ವರ್ಷಕ್ಕಿಂತ ಐಎಂಎಎಲ್ ರಾಜಸ್ವದಲ್ಲಿ 2,048.35 ಕೋಟಿ ರೂ ಹೆಚ್ಚಳವಾಗಿದೆ.









