ಸಮಗ್ರ ನ್ಯೂಸ್: ಟಿಬೆಟ್ ಗಡಿಗೆ ಹೊಂದಿಕೊಂಡಂತಿರುವ ನೇಪಾಳದ ಉತ್ತರ ರಸುವಾ ಜಿಲ್ಲೆಯಲ್ಲಿ ಬುಧವಾರ ಭೋಟೆ ಕೋಶಿ ನದಿಯಲ್ಲಿ ಉಂಟಾದ ಭಾರಿ ಹಠಾತ್ ಪ್ರವಾಹಕ್ಕೆ ಕನಿಷ್ಠ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಮನೆಗಳು, ವಾಹನಗಳು, ಸೇತುವೆಗಳು ಹಾಗೂ ಮೂಲಸೌಕರ್ಯ ಯೋಜನೆಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ನೇಪಾಳ-ಟಿಬೆಟ್ ಗಡಿ ಭಾಗದ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಬುಧವಾರ ಸಂಭವಿಸಿದ ಹಠಾತ್ ಪ್ರವಾಹ ಹಾಗೂ ಭೂಕುಸಿತದಿಂದಾಗಿ ನೀರಿನ ಮಟ್ಟ ಸುಮಾರು 30 ಅಡಿಗಳಷ್ಟು ಏರಿಕೆಯಾಗಿದೆ. ಘಟನೆಯಲ್ಲಿ ಕನಿಷ್ಠ 160 ಮಂದಿ ಮೃತಪಟ್ಟಿದ್ದು, ಭಾರತದ ಕೈಲಾಸ ಮಾನಸ ಸರೋವರ ಯಾತ್ರಿಕರು ಸೇರಿದಂತೆ ನೂರಾರು ಮಂದಿ ನಾಪತ್ತೆಯಾಗಿದ್ದಾರೆ.
ಸಂಕಷ್ಟಕ್ಕೆ ಸಿಲುಕಿರುವ ಸುಮಾರು 400 ಜನರಲ್ಲಿ 105 ಕ್ಕೂ ಹೆಚ್ಚು ಭಾರತೀಯರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಪ್ರವಾಹದ ನೀರು ಕೆಳಮುಖವಾಗಿ ಹರಿಯುತ್ತಿರುವುದರಿಂದ ನೇಪಾಳದ ಗಡಿಗೆ ಹೊಂದಿಕೊಂಡಿರುವ ಬಿಹಾರದಲ್ಲೂ ಜಾಗರೂಕತೆಯ ಎಚ್ಚರಿಕೆ (Alert) ನೀಡಲಾಗಿದೆ.
ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಟಿಬೆಟ್ ಕಡೆಯಿಂದ ಭೋಟೆ ಕೋಶಿ ನದಿಗೆ ಭಾರಿ ಪ್ರಮಾಣದ ನೀರು ನುಗ್ಗಿದ್ದು, ತಿಮುರೆ ಮತ್ತು ಸಯಾಪ್ರು ಬೆಸಿ ಪ್ರದೇಶಗಳಲ್ಲಿ ತೀವ್ರ ಹಾನಿ ಸಂಭವಿಸಿದೆ. ಹಠಾತ್ ಪ್ರವಾಹಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲವಾದರೂ, ಟಿಬೆಟ್ ಭಾಗದಲ್ಲಿ ಹಿಮನದಿ ಸರೋವರ ಸ್ಫೋಟಗೊಂಡಿರುವ (GLOF – Glacial Lake Outburst Flood) ಶಂಕೆ ವ್ಯಕ್ತವಾಗಿದೆ.
ನೇಪಾಳದ ವಿದೇಶಾಂಗ ಸಚಿವರು ಭೂಕಂಪದಿಂದ ಭೂಕುಸಿತ ಸಂಭವಿಸಿರಬಹುದು ಎಂಬ ಸಂಭಾವ್ಯ ವಿವರಣೆಯನ್ನು ನೀಡಿದ್ದಾರೆ. ನೇಪಾಳ ಸರ್ಕಾರ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರೂ, ನೀರಿನ ಮಟ್ಟ ಹೆಚ್ಚಿರುವುದರಿಂದ ಹೆಲಿಕಾಪ್ಟರ್‌ಗಳನ್ನು ಇಳಿಸಲು ಸಾಧ್ಯವಾಗಿಲ್ಲ. ರಸುವಾದಲ್ಲಿ ಉಂಟಾದ ಪ್ರವಾಹದ ಕಾರಣದಿಂದಾಗಿ ಒಟ್ಟು 384 ಪ್ರಯಾಣಿಕರು, ಇವರಲ್ಲಿ 291 ವಿದೇಶಿಯರು ಮತ್ತು 93 ನೇಪಾಳಿ ಪ್ರಜೆಗಳು ನಾಪತ್ತೆಯಾಗಿದ್ದಾರೆ.
ಈ ಪ್ರಯಾಣಿಕರಲ್ಲಿ ಕನಿಷ್ಠ 105 ಭಾರತೀಯ ಪ್ರವಾಸಿಗರು, 37 ಅನಿವಾಸಿ ಭಾರತೀಯರು ಹಾಗೂ ಅಮೆರಿಕ, ಮಲೇಷ್ಯಾ, ಯುಕೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನೆದರ್‌ಲ್ಯಾಂಡ್ಸ್‌ನ ಪ್ರವಾಸಿಗರು ಸೇರಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿಯ (NTB) ಹೇಳಿದೆ.
ನೇಪಾಳ ಪೊಲೀಸರು ಮೃತರ ಸಂಖ್ಯೆ 157 ಎಂದು ವರದಿ ಮಾಡಿದ್ದಾರೆ. ಚೀನಾ ಅಧಿಕಾರಿಗಳ ವರದಿ ಪ್ರಕಾರ, ಟಿಬೆಟ್ ನ ಗೈರಾಂಗ್ ಕೌಂಟಿಯಲ್ಲಿ 3 ಮಂದಿ ಮೃತಪಟ್ಟಿದ್ದು, 265 ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ, ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ ಒಟ್ಟು 160 ಮಂದಿ ಮೃತಪಟ್ಟಿದ್ದಾರೆ.
ನೇಪಾಳ ಪೊಲೀಸರ ಪ್ರಕಾರ, 466 ವಿದೇಶಿಯರು ಹಾಗೂ 113 ಸ್ಥಳೀಯರು ಸೇರಿ ಒಟ್ಟು 579 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 133 ಭಾರತೀಯರು ಮತ್ತು 37 ಅನಿವಾಸಿ ಭಾರತೀಯರು (NRI) ಸೇರಿದ್ದಾರೆ. ಸಹಾಯಕ್ಕಾಗಿ ನೇಪಾಳ ಪ್ರವಾಸೋದ್ಯಮ ಮಂಡಳಿಯು ಉಚಿತ ತುರ್ತು ಸಹಾಯವಾಣಿ ತೆರೆದಿದ್ದು, 1234, ಹಾಟ್‌ಲೈನ್ ಸಂಖ್ಯೆ 1144 ಅಥವಾ ಪ್ರವಾಸಿ ಪೊಲೀಸ್ ಸಹಾಯವಾಣಿ ಸಂಖ್ಯೆ 9851289445 ಅನ್ನು ಬಿಡುಗಡೆ ಮಾಡಿದೆ.


















