ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೊಂಚ ಮಳೆಯ ಅಬ್ಬರ ಮತ್ತೆ ಕಡಿಮೆ ಆಗಿದೆ. ಆದರೆ ಬೆಂಗಳೂರಲ್ಲಿ ಮಾತ್ರ ಸಂಜೆ ಆಗುತ್ತಿದ್ದಂತೆ ಗಂಟೆಗಳ ಕಾಲ ತುಂತುರು ಮಳೆ ಆಗುತ್ತಿದೆ. ಇದೀಗ ಹವಾಮಾನ ಇಲಾಖೆ ಇಂದಿನ ವರದಿ ಪ್ರಕಾರ, ಇಂದಿನಿಂದ ಆಗಷ್ಟ್ 24ರ ವರೆಗೆ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗಗಳಲ್ಲಿ ಮಳೆ ಪ್ರಮಾಣ ಸ್ವಲ್ಪ ಹೆಚ್ಚಿರಲಿದೆ ಎಂದು ವರದಿಯಾಗಿದೆ.
ಇಂದು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಧ್ಯಮ ಮಳೆ ಹಾಗೂ ಗುಡುಗು-ಮಿಂಚಿನ ಸಾಧ್ಯತೆ ಇದೆ. ಆದರೆ, ಕೊಡಗು, ಹಾಸನದ ಸಕಲೇಶಪುರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗದ ಕರಾವಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ತುಂತುರು ಅಥವಾ ಹಗುರ ಮಳೆಯ ಸಾಧ್ಯತೆ ಇದೆ.
ಆಗಸ್ಟ್ 23 ಮತ್ತು 24ರಂದು ಕರಾವಳಿ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಆದರೆ, ಆಗಸ್ಟ್ 25ರ ವರೆಗೆ ನಿರಂತರವಾಗಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ.
ದಕ್ಷಿಣ ಒಳನಾಡು ಕರ್ನಾಟಕ (South Interior Karnataka) ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಇಂದಿನಿಂದ ಆಗಸ್ಟ್ 24ರ ವರೆಗೆ ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಈ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. ಆಗಸ್ಟ್ 22 ರಿಂದ 25 ರವರೆಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ವಿಜಯಪುರ ಮುಂತಾದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರೂ, ಗಾಳಿಯ ತೀವ್ರತೆ ಹೆಚ್ಚಿರಲಿದೆ. ಆಗಸ್ಟ್ 22 ರಿಂದ 24ರ ವರೆಗೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ತೀವ್ರವಾದ ಗಾಳಿ ಬೀಸುವ ನಿರೀಕ್ಷೆಯಿದೆ. ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಅಥವಾ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.


















