ಸಮಗ್ರ ನ್ಯೂಸ್: ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಸರ್ಕಾರವು ತನ್ನ ಪ್ರಮುಖ ಚುನಾವಣಾ ಭರವಸೆಗಳಲ್ಲೊಂದಾದ ‘ಪ್ರಿಯದರ್ಶಿನಿ’ ಯೋಜನೆಗೆ ಸೋಮವಾರ ಅಧಿಕೃತವಾಗಿ ಚಾಲನೆ ನೀಡಿದೆ. ಈ ಯೋಜನೆಯಡಿ ರಾಜ್ಯಾದ್ಯಂತ ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗೆ ಸಾಮಾನ್ಯ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಸಿಗಲಿದೆ.
ತಿರುವನಂತಪುರಂನ ತಂಬಾನೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಸಾಂಪ್ರದಾಯಿಕ ದೀಪ ಬೆಳಗಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದರು. ಬಳಿಕ ಮುಖ್ಯಮಂತ್ರಿಗಳು, ಸಾರಿಗೆ ಸಚಿವ ಸಿ.ಪಿ. ಜಾನ್ ಹಾಗೂ ಇತರ ಸಚಿವರೊಂದಿಗೆ ತಂಬಾನೂರಿನಿಂದ ಸಚಿವಾಲಯದವರೆಗೆ ಸಾಮಾನ್ಯ ಮಹಿಳಾ ಪ್ರಯಾಣಿಕರ ಜೊತೆ ಬಸ್‌ನಲ್ಲಿ ಪ್ರಯಾಣಿಸಿದರು.
ಉದ್ಘಾಟನಾ ಸಮಾರಂಭದ ಅಂಗವಾಗಿ ಬಲೂನ್‌ಗಳಿಂದ ಅಲಂಕೃತಗೊಂಡಿದ್ದ ಪೆರುಮಾತುರಾ ಮಾರ್ಗದ ಬಸ್ ಅನ್ನು ತಂಬಾನೂರು ನಿಲ್ದಾಣಕ್ಕೆ ತರಲಾಗಿತ್ತು. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ, ಈ ಮೊದಲ ಬಸ್‌ಗೆ ಮಹಿಳಾ ಚಾಲಕಿ (Driver) ಮತ್ತು ಮಹಿಳಾ ನಿರ್ವಾಹಕಿ (Conductor) ಸಾರಥ್ಯ ವಹಿಸಿದ್ದು ವಿಶೇಷವಾಗಿತ್ತು.
ಉಚಿತ ಪ್ರಯಾಣಕ್ಕಾಗಿ ಯಾವುದೇ ಮುಂಗಡ ನೋಂದಣಿ, ದಾಖಲೆ ಅಥವಾ ಅರ್ಜಿ ಸಲ್ಲಿಕೆಯ ಅಗತ್ಯವಿರುವುದಿಲ್ಲ. ಪ್ರಯಾಣದ ಸಮಯದಲ್ಲಿ ನಿರ್ವಾಹಕರಿಂದ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರದ (ETM) ಮೂಲಕ ಶೂನ್ಯ ಮೌಲ್ಯದ (Zero-value) ‘ಪ್ರಿಯದರ್ಶಿನಿ’ ಟಿಕೆಟ್ ಪಡೆದರೆ ಸಾಕು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣೆ ವೇಳೆ ಘೋಷಿಸಿದ್ದ ಐದು ‘ಇಂದಿರಾ ಗ್ಯಾರಂಟಿ’ಗಳಲ್ಲಿ ಈ ಯೋಜನೆಯೂ ಒಂದಾಗಿದೆ. “ದೈನಂದಿನ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಬಡ ಮಹಿಳೆಯರು, ಮನೆಗೆಲಸದವರಿಗೆ ಇದರಿಂದ ಆರ್ಥಿಕವಾಗಿ ಭಾರಿ ಅನುಕೂಲವಾಗಲಿದೆ,” ಎಂದು ಸಿಎಂ ಸತೀಶನ್ ತಿಳಿಸಿದ್ದಾರೆ.
ಇನ್ನು ಕೇರಳಂನ ಗಡಿ ಹಂಚಿಕೊಂಡಿರುವ ದ.ಕ ಜಿಲ್ಲೆಯ ಮಹಿಳೆಯರೂ ಕೂಡಾ ಪ್ರಿಯದರ್ಶಿನಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಮೊದಲ ದಿನವೇ ನೂರಾರು ಮಹಿಳೆಯರು ಅಂತಾರಾಜ್ಯ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ನಡೆಸಿದ್ದಾರೆ.
ಪ್ರಮುಖವಾಗಿ ಕಾಸರಗೋಡು – ಮಂಗಳೂರು, ಕಾಸರಗೋಡು – ಪುತ್ತೂರು, ಕಾಸರಗೋಡು – ಸುಳ್ಯ ಮಾರ್ಗದಲ್ಲಿ ಸಂಚರಿಸುವ ಕೇರಳ ಸಾರಿಗೆ ಬಸ್ ಗಳಲ್ಲಿ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕಾರಣದಿಂದ ಕರ್ನಾಟಕದ ಮಹಿಳೆಯರಿಗೆ ಡಬಲ್ ಧಮಾಕಾ ಒದಗಿದಂತಾಗಿದೆ.








